×
Ad

ಭ್ರಷ್ಟಾಚಾರ ಆರೋಪ: ಆರೋಗ್ಯ ಸಚಿವ ವಿಜಯ್ ಸಿಂಗ್ಲಾರನ್ನು ವಜಾಗೊಳಿಸಿದ ಪಂಜಾಬ್ ಸಿಎಂ ಭಗವಂತ್ ಮಾನ್

Update: 2022-05-24 13:15 IST
Photo:twitter

ಚಂಡಿಗಢ: ದೃಢವಾದ ಸಾಕ್ಷ್ಯಾಧಾರಗಳು ದೊರೆತ ನಂತರ ಭ್ರಷ್ಟಾಚಾರ ಆರೋಪದ ಮೇಲೆ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ  ಸಂಪುಟದಿಂದ ವಜಾಗೊಳಿಸಿದ್ದಾರೆ ಎಂದು NDTV ವರದಿ ಮಾಡಿದೆ.

ಸಂಪುಟದಿಂದ ವಜಾಗೊಳಿಸಿದ ಬೆನ್ನಿಗೇ ಪಂಜಾಬ್ ಪೊಲೀಸ್ ಇಲಾಖೆಯ ಭ್ರಷ್ಟಾಚಾರ ನಿಗ್ರಹ ದಳವು ವಿಜಯ್ ಸಿಂಗ್ಲಾರನ್ನು ಬಂಧಿಸಿದೆ. ಸಿಂಗ್ಲಾ ಅಧಿಕಾರಿಗಳಿಂದ ಗುತ್ತಿಗೆಗಳಲ್ಲಿ ಒಂದು ಶೇಕಡಾ ಕಮಿಷನ್‌ಗೆ ಬೇಡಿಕೆಯಿಡುತ್ತಿದ್ದರು ಎನ್ನಲಾಗಿದೆ.

10 ದಿನಗಳ ಹಿಂದಷ್ಟೇ ಸಚಿವರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಈ ಕ್ರಮ ಕೈಗೊಂಡಿದ್ದಾರೆ. ಮುಖ್ಯಮಂತ್ರಿಯೊಬ್ಬರು ತಮ್ಮದೇ ಸಂಪುಟ ಸಹೋದ್ಯೋಗಿಯ ವಿರುದ್ಧ ಈ ರೀತಿಯ ಕಠಿಣ ಕ್ರಮ ಕೈಗೊಂಡಿರುವುದು ದೇಶದ ಇತಿಹಾಸದಲ್ಲಿ ಇದು ಎರಡನೇ ಬಾರಿ. ಇದಕ್ಕೂ ಮೊದಲು, ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ  ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ 2015 ರಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ತಮ್ಮ ಸಂಪುಟದ ಸಚಿವರಲ್ಲಿ ಒಬ್ಬರನ್ನು ವಜಾಗೊಳಿಸಿದ್ದರು.

ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಭ್ರಷ್ಟಾಚಾರ ವಿರೋಧಿ ಮಾದರಿಗೆ ಅನುಗುಣವಾಗಿ ಇಂತಹ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪಕ್ಷ ತಿಳಿಸಿದೆ.

ತಮ್ಮ ಪಕ್ಷಕ್ಕೆ ಮಾತ್ರ ತಮ್ಮ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವ ಪ್ರಾಮಾಣಿಕತೆ ಮತ್ತು ಧೈರ್ಯವಿದೆ ಎಂದು ಎಎಪಿ ಸಂಸದ ರಾಘವ್ ಚಡ್ಡಾ ಹೇಳಿದ್ದಾರೆ.

"ನಿಮ್ಮ ಬಗ್ಗೆ ಹೆಮ್ಮೆ ಇದೆ ಭಗವಂತ ಮಾನ್ . ನಿಮ್ಮ ಕಾರ್ಯ ನನ್ನ ಕಣ್ಣಲ್ಲಿ ನೀರು ತರಿಸಿದೆ. ಇಡೀ ರಾಷ್ಟ್ರ ಇಂದು ಎಎಪಿ ಬಗ್ಗೆ ಹೆಮ್ಮೆ ಪಡುತ್ತಿದೆ'' ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News