×
Ad

ಪಿಎಫ್‌ಐ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಘೋಷಣೆ ಪ್ರಕರಣ: ಓರ್ವನ ಬಂಧನ

Update: 2022-05-24 16:54 IST
Screengrab/PFI/Facebook

ಕೊಚ್ಚಿ: ಕೇರಳದ ಆಲಪ್ಪುಳದಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರ್ಯಾಲಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬ ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಿರುವ ವೀಡಿಯೊ ವೈರಲ್ ಆದ ಬಳಿಕ, ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೇ 21 ರಂದು ನಗರದಲ್ಲಿ ಪಿಎಫ್‌ಐ ನಡೆಸಿದ “ಗಣರಾಜ್ಯ ಉಳಿಸಿ”(Save the republic) ರ್ಯಾಲಿಯಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಹೆಗಲ ಮೇಲೆ ಕುಳಿತ ಬಾಲಕನೊಬ್ಬ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ನವಾಝ್ ವಂದನಂ, ಜಿಲ್ಲಾ ಕಾರ್ಯದರ್ಶಿ ಮುಜೀಬ್ ಮತ್ತು ಇತರ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ. ಅವರ ವಿರುದ್ಧ ಸೆಕ್ಷನ್ 153-ಎ, 295-ಎ, 505 (1) (ಬಿ) , 505 (1) (ಸಿ), 505 (2), 506 ಮತ್ತು ಕೇರಳದ ಪೊಲೀಸ್ ಕಾಯಿದೆ 120 (ಒ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. 

"ಈಗ ನಾವು ಒಬ್ಬ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ, ನಾವು ಅವನನ್ನು ಪ್ರಶ್ನಿಸುತ್ತಿದ್ದೇವೆ. ಮುಂದಿನ ಕ್ರಮ ಅನುಸರಿಸಲಾಗುವುದು. ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಅದೇ ವೇಳೆ, ಇಂತಹ ಘೋಷಣೆಗಳು ಸಂಘಟನೆಯ ನೀತಿಗೆ ವಿರುದ್ಧವಾಗಿದ್ದು, ಈ ಬಗ್ಗೆ ಪರಿಶೀಲಿಸುವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹೇಳಿದೆ.

"ನಾವು ಅನುಮೋದಿತ ಘೋಷಣೆಗಳನ್ನು ನೀಡಿದ್ದೇವೆ,  ಬಾಲಕನೊಬ್ಬ ಘೋಷಣೆ ಕೂಗುತ್ತಿರುವ ದೃಶ್ಯ ಇದೀಗ ನಮ್ಮ ಗಮನಕ್ಕೆ ಬಂದಿದೆ. ಆ ಘೋಷಣೆಗಳನ್ನು ರ್ಯಾಲಿಯ ಸಂಘಟಕರು ಅಂಗೀಕರಿಸಲಿಲ್ಲ ಅಥವಾ ನೀಡಲಿಲ್ಲ. ಪ್ರಚೋದನಕಾರಿ ಘೋಷಣೆಗಳನ್ನು ಪ್ರಚೋದಿಸುವುದು ಅಥವಾ ಎತ್ತುವುದು ಸಂಘಟನೆಯ ನೀತಿಯಲ್ಲ.” ಎಂದು ಪಿಎಫ್‌ಐ ನಾಯಕರು ಹೇಳಿರುವುದಾಗಿ Scroll.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News