'ಸಿಬಿಐ ಅಧಿಕಾರಿʼ ಎಂದು ಹೇಳಿಕೊಂಡು 65 ವರ್ಷದ ವೃದ್ಧನ ಮೇಲೆ ಹಲ್ಲೆ ನಡೆಸಿದ್ದ ಬಿಜೆಪಿ ಕಾರ್ಯಕರ್ತ: ಪೊಲೀಸ್

Update: 2022-05-24 12:46 GMT
Photo: Twitter Screengrab

 ಭೋಪಾಲ್ : ʼಮುಸ್ಲಿಂʼ ಎಂದುಕೊಂಡು ಮಾನಸಿಕವಾಗಿ ಅಸ್ವಸ್ಥರಾಗಿರುವ ಹಿರಿಯ ನಾಗರಿಕರೊಬ್ಬರಿಗೆ ಥಳಿಸಿ ಅವರನ್ನು ಹತ್ಯೆಗೈದ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಆತ  ಆ ವ್ಯಕ್ತಿಗೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾಗಿ ವರದಿಗಳು ತಿಳಿಸಿವೆ.

ಆರೋಪಿ ದಿನೇಶ್ ಕುಶ್ವಾಹ ಎಂಬಾತ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನಿಗೆ ಬೆದರಿಸಿ ಆತನಿಂದ ಈ ಘಟನೆಯ ವೀಡಿಯೋ ಚಿತ್ರೀಕರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಈ ವೀಡಿಯೋದಲ್ಲಿ ಆರೋಪಿಯು 65 ವರ್ಷದ ಭವರಲಾಲ್ ಜೈನ್ ಎಂಬವರ ಕೆನ್ನೆಗೆ ಸತತ ಬಾರಿಸುತ್ತಿರುವುದು ಕಾಣಿಸುತ್ತದೆ. ನಿನ್ನ ಹೆಸರು ಮೊಹಮ್ಮದ್ ಹೌದೇ, ಆಧಾರ್ ಕಾರ್ಡ್ ತೋರಿಸು ಎಂದು ಹೇಳಿ ಆತ ಹಲ್ಲೆ ನಡೆಸಿದ್ದು ವೀಡಿಯೋದಲ್ಲಿ ಸೆರೆಯಾಗಿದೆ.

ರತ್ಲಂ ಜಿಲ್ಲೆಯ ನಿವಾಸಿಯಾಗಿರುವ ಜೈನ್ ರಾಜಸ್ಥಾನದ ಚಿತ್ತೋರಘರ್ ಎಂಬಲ್ಲಿ ಮೇ 16ರಂದು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಕಾಣೆಯಾಗಿದ್ದರು. ಸೋಮವಾರ ಅವರ ಮೃತದೇಹ ನೀಮುಚ್ ಎಂಬಲ್ಲಿನ ಕಾರು ಶೋರೂಂನ ಮುಂಭಾಗ  ಪತ್ತೆಯಾಗಿತ್ತು.

ಹಲ್ಲೆಯ ವೀಡಿಯೋದೊಂದಿಗೆ ಜೈನ್ ಕುಟುಂಬ ಪೊಲೀಸ್ ದೂರು ನೀಡಿದ ನಂತರ ಕುಶ್ವಾಹ ಬಂಧನ ನಡೆದಿತ್ತು. ಆತ ಮಾಜಿ ಬಿಜೆಪಿ ಕಾರ್ಪೊರೇಟರ್ ರ ಪತಿಯಾಗಿದ್ದಾನೆ.

ಈ ಹಲ್ಲೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ  ಹರಿದಾಡಿಸಿದ ಸ್ವಚ್ಛ ಭಾರತ್ ಎಂಬ ವಾಟ್ಸ್ಯಾಪ್ ಗ್ರೂಪ್‍ನ ಆರು ಸದಸ್ಯರ ವಿರುದ್ಧವೂ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News