ಕ್ವಾಡ್ ಸಭೆ ಸಂದರ್ಭ ಜಪಾನ್ ಬಳಿ ರಶ್ಯ, ಚೀನಾದ ಯುದ್ಧವಿಮಾನಗಳ ಹಾರಾಟ: ಜಪಾನ್ ರಕ್ಷಣಾ ಸಚಿವ

Update: 2022-05-24 18:21 GMT

ಟೋಕಿಯೊ, ಮೇ 24: ಜಪಾನ್ನ ಟೋಕಿಯೋದಲ್ಲಿ ಮಂಗಳವಾರ ಕ್ವಾಡ್ ಸಂಘಟನೆಯ ಮುಖಂಡರ ಸಭೆ ನಡೆಯುತ್ತಿದ್ದ ಸಂದರ್ಭ ಜಪಾನ್ ಬಳಿ ರಶ್ಯ ಮತ್ತು ಚೀನಾದ ಯುದ್ಧವಿಮಾನಗಳು ಹಾರಾಟ ನಡೆಸಿದ್ದವು ಎಂದು ಜಪಾನ್ನ ರಕ್ಷಣಾ ಸಚಿವ ನೊಬುವೊ ಕಿಷಿ ಹೇಳಿದ್ದಾರೆ.

ಈ ಬಗ್ಗೆ ರಶ್ಯ ಮತ್ತು ಚೀನಾಕ್ಕೆ ತೀವ್ರ ಕಳವಳವನ್ನು ಸರಕಾರ ವ್ಯಕ್ತಪಡಿಸಿದೆ. ವಿಮಾನಗಳು ಪ್ರಾದೇಶಿಕ ವಾಯುಪ್ರದೇಶವನ್ನು ಉಲ್ಲಂಘಿಸಿಲ್ಲ ನವೆಂಬರ್ ಬಳಿಕ ನಾಲ್ಕನೇ ಬಾರಿ ರಶ್ಯ ಮತ್ತು ಚೀನಾದ ಜಂಟಿ ವಿಮಾನಗಳು ಜಪಾನ್ ಬಳಿ ಪತ್ತೆಯಾಗಿವೆ ಎಂದವರು ಹೇಳಿದ್ದಾರೆ. ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ನ ಮುಖಂಡರನ್ನು ಒಳಗೊಂಡ ಕ್ವಾಡ್ ಸಂಘಟನೆ ಮಂಗಳವಾರ ನಡೆಸಿದ ಸಭೆಯಲ್ಲಿ ಪ್ರಾದೇಶಿಕ ಭದ್ರತೆಯ ಬಗ್ಗೆ ಚರ್ಚಿಸಲಾಗಿದೆ.

ಚೀನಾದ 2 ಬಾಂಬರ್ ವಿಮಾನ ಹಾಗೂ ರಶ್ಯದ 2 ಬಾಂಬರ್ ವಿಮಾನ ಜಪಾನ್ ಸಮುದ್ರದ ಬಳಿ ಕಾಣಿಸಿಕೊಂಡ ಬಳಿಕ ಪೂರ್ವ ಚೀನಾ ಸಮುದ್ರದತ್ತ ಹಾರಿಹೋಗಿವೆ. ಅಲ್ಲಿಂದ ನಾಲ್ಕು ಯುದ್ಧವಿಮಾನಗಳು ಪೆಸಿಫಿಕ್ ಸಾಗರದತ್ತ ಜಂಟಿ ಹಾರಾಟ ನಡೆಸಿವೆ. ಕೆಲ ಹೊತ್ತಿನ ಬಳಿಕ, ರಶ್ಯದ ಗುಪ್ತಚರ ಮಾಹಿತಿ ಸಂಗ್ರಹಿಸುವ ವಿಮಾನ ಮಧ್ಯ ಜಪಾನ್ನ ಹೊಕಾಯಿಡೊ ಪ್ರಾಂತದಿಂದ ನೊಟೊ ದ್ವೀಪಖಂಡಕ್ಕೆ ಹಾರಾಟ ನಡೆಸಿದೆ. ಕ್ವಾಡ್ ಶೃಂಗಸಭೆಯ ಸಂದರ್ಭವೇ ನಡೆದ ಈ ಕ್ರಮ ಅತ್ಯಂತ ಪ್ರಚೋದನಕಾ ರಿಯಾಗಿದೆ ಎಂದು ಜಪಾನ್ ಹೇಳಿದೆ.

ನಮ್ಮ ದೇಶದ ಹಾಗೂ ಪ್ರಾದೇಶಿಕ ಭದ್ರತೆಯ ದೃಷ್ಟಿಕೋನದಿಂದ ನಮ್ಮ ಗಂಭೀರ ಕಳವಳವನ್ನು ರಾಜತಾಂತ್ರಿಕ ರೀತಿಯಲ್ಲಿ ಸಲ್ಲಿಸಲಾಗಿದೆ. ಉಕ್ರೇನ್ ವಿರುದ್ಧದ ರಶ್ಯದ ಆಕ್ರಮಣದ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆಗೆ ವ್ಯತಿರಿಕ್ತವಾಗಿ, ರಶ್ಯದ ಸಹಯೋಗದೊಂದಿಗೆ ಚೀನಾ ನಡೆಸಿರುವ ಈ ಕೃತ್ಯ ಗಂಭೀರ ಆತಂಕಕ್ಕೆ ಕಾರಣವಾಗಿದೆ. ಇದನ್ನು ಕಡೆಗಣಿಸುವಂತಿಲ್ಲ ಎಂದು ಕಿಶಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News