ದೇಶದಿಂದ ಸಕ್ಕರೆ ರಫ್ತು ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ: ಕೇಂದ್ರ ಸರ್ಕಾರ

Update: 2022-05-25 03:33 GMT

ಹೊಸದಿಲ್ಲಿ: ದೇಶದಿಂದ ಸಕ್ಕರೆ ರಫ್ತು ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಈ ವರ್ಷದ ಸೆಪ್ಟೆಂಬರ್‌ ನಲ್ಲಿ ಆರಂಭವಾಗುವ ಸೀಸನ್‍ನಲ್ಲಿ ಗರಿಷ್ಠ 100 ಲಕ್ಷ ಟನ್ ಮಾತ್ರ ರಫ್ತು ಮಾಡಲು ಅವಕಾಶ ನೀಡಲಾಗಿದೆ. ಕಳೆದ ಕೆಲ ತಿಂಗಳುಗಳಲ್ಲಿ ಸಕ್ಕರೆಯ ರಫ್ತು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.

"ದೇಶದಿಂದ ಸಕ್ಕರೆ ಭಾರಿ ಪ್ರಮಾಣದಲ್ಲಿ ರಫ್ತು ಆಗುತ್ತಿರುವುದನ್ನು ಪರಿಗಣಿಸಿ ಹಾಗೂ ದೇಶದಲ್ಲಿ ಸಾಕಷ್ಟು ಪ್ರಮಾಣದ ಸಕ್ಕರೆ ದಾಸ್ತಾನು ನಿರ್ವಹಿಸಬೇಕಾದ ಹಿನ್ನೆಲೆಯಲ್ಲಿ ಮತ್ತು ಸಕ್ಕರೆ ಬೆಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ದೇಶದ ಜನಸಾಮಾನ್ಯರ ಹಿತಾಸಕ್ತಿ ಕಾಪಾಡಬೇಕಾದ ಅಗತ್ಯತೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2022ರ ಜೂನ್ 1ರಿಂದ ಸಕ್ಕರೆ ರಫ್ತನ್ನು ನಿರ್ಬಂಧಿಸುತ್ತಿದೆ" ಎಂದು ಕೇಂದ್ರ ಆಹಾರ ಸಚಿವಾಲಯ ಹೇಳಿದೆ.

ಹೊಸ ಆದೇಶದ ಅನ್ವಯ ಸಕ್ಕರೆ ಕಾರ್ಖಾನೆಗಳು ರಫ್ತು ಬಿಡುಗಡೆ ಕಾರ್ಯಾದೇಶ (ಇಆರ್‍ಓ) ನೀಡುವ ಮುನ್ನ ಕೇಂದ್ರ ಆಹಾರ ಸಚಿವಾಲಯದಿಂದ ಅಗತ್ಯ ಅನುಮೋದನೆಗಳನ್ನು ಪಡೆಯುವುದು ಕಡ್ಡಾಯ. ಮಂಗಳವಾರ ತಡರಾತ್ರಿ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯ ಪ್ರಕಾರ, ಮೇ 31ರವರಗೆ ಯಾವುದೇ ಇಆರ್‍ಓ ಅನುಮೋದನೆ ಇಲ್ಲದೇ ಸಕ್ಕರೆ ರಫ್ತಿಗೆ ಅವಕಾಶ ನೀಡಲಾಗುತ್ತದೆ. ಆದರೆ ಜೂನ್ 1ರಿಂದ ಅಕ್ಟೋಬರ್ 30ರವರೆಗೆ ರಫ್ತು ಮಾಡಬೇಕಾದರೆ ಇಆರ್‍ಓ ಕಡ್ಡಾಯ.

ಅಂತೆಯೇ ಸಕ್ಕರೆ ಕಾರ್ಖಾನೆಗಳು ರಫ್ತಿಗೆ ಬಿಡುಗಡೆ ಮಾಡಿದ ದೈನಿಕ ವರದಿಗಳನ್ನು ಮೇ 31ರವರೆಗೆ ಪ್ರತಿದಿನ ಸಲ್ಲಿಸಬೇಕಾಗುತ್ತದೆ. ಜತೆಗೆ ಜೂನ್ 1ರಂದು ಕ್ರೋಢೀಕೃತ ವರದಿಯನ್ನು ಸಲ್ಲಿಸಬೇಕಿದ್ದು, ಜೂನ್ 1ರ ಬಳಿಕ ಮಾಡುವ ರಫ್ತಿಗೆ ಕೇಂದ್ರದಿಂದ ಅನುಮತಿ ಪಡೆಯಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News