ಕೇರಳ ಪ್ರವೇಶ ಬಳಿಕ ಮುಂಗಾರು ಮಾರುತ ಪ್ರಗತಿ ಕುಂಠಿತ ನಿರೀಕ್ಷೆ: ಹವಾಮಾನ ಇಲಾಖೆ

Update: 2022-05-25 02:26 GMT
ಫೈಲ್‌ ಫೋಟೊ 

ಹೊಸದಿಲ್ಲಿ: ಮುಂಗಾರು ಮಾರುತ ಭಾರತಕ್ಕೆ ಪಸರಿಸುವ ಮುನ್ನ ತನ್ನ ಬಲವನ್ನು ಕಳೆದುಕೊಳ್ಳಲಿದ್ದು, ಕೇರಳ ಪ್ರವೇಶಿಸಿದ ಬಳಿಕ ಮುಂಗಾರು ಮಾರುತದ ಪ್ರಗತಿ ಕುಂಠಿತವಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆಯ ತಜ್ಞರು ಹೇಳಿದ್ದಾರೆ.

ಭಾರತದ ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ, ಮೇ 27ರ ಸುಮಾರಿಗೆ ಮುಂಗಾರು ಮಾರುತ ಕೇರಳವನ್ನು ಪ್ರವೇಶಿಸಲಿದೆ. ಅಂದಾಜಿಸುವಿಕೆಯ ಲೋಪವನ್ನು ಪರಿಗಣಿಸಿದರೆ ನಾಲ್ಕು ದಿನ ಹೆಚ್ಚು ಅಥವಾ ಕಡಿಮೆಯಾಗುವ ಸಾಧ್ಯತೆ ಇದೆ. ಈ ವರ್ಷ ಅಂದಾಜಿಸಿದ ದಿನಾಂಕಕ್ಕೆ ಕೇರಳವನ್ನು ಮುಂಗಾರು ಪ್ರವೇಶಿಸಿದರೂ, ಆ ಬಳಿಕ ಮುಂಗಾರು ಪ್ರಗತಿ ಕೆಲ ದಿನಗಳ ವರೆಗೆ ತೀರಾ ನಿಧಾನವಾಗಿರುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇರಳ ಪ್ರವೇಶಿಸಿದ ಬಳಿಕ ಮುಂಗಾರು ಮಾರುತ ವೇಗ ಕಳೆದುಕೊಳ್ಳಲಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

"ಹವಾಮಾನ ಮಾದರಿಯಿಂದ ತಿಳಿದುಬರುವಂತೆ, ಕೇರಳ ಪ್ರವೇಶಿಸಿದ ಬಳಿಕ ಮುಂಗಾರು ಪ್ರವಾಹ ಬಂಗಾಳ ಕೊಲ್ಲಿಯ ನೈರುತ್ಯಭಾಗವನ್ನು ತಲುಪಲು ಕೆಲ ದಿನಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ಕೇರಳ ಹಾಗೂ ನೈರುತ್ಯ ಬಂಗಾಳಕೊಲ್ಲಿಯನ್ನು ಏಕಕಾಲಕ್ಕೆ ಮುಂಗಾರು ಪ್ರವೇಶಿಸುತ್ತದೆ. ಇದರಿಂದ ಮುಂಗಾರು ಪ್ರಗತಿಗೆ ಅಡ್ಡಿಯಾಗುವ ಸಾಧ್ಯತೆ ಇದೆ" ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂಗಾರು ಸಾಮಾನ್ಯವಾಗಿ ಪರ್ಯಾಯವಾಗಿ ಪ್ರಬಲ ಹಾಗೂ ದುರ್ಬಲ ನಾಡಿಮಿಡಿತವನ್ನು ಹೊಂದಿರುತ್ತದೆ. ಪ್ರಸ್ತುತ ನಾವು ಪ್ರಬಲ ಮಿಡಿತವನ್ನು ಕಾಣುತ್ತಿದ್ದು, ದುರ್ಬಲ ಮಿಡಿತ ಮುಂದೆ ಅನುಭವಕ್ಕೆ ಬರಲಿದೆ. ಮುಂಗಾರು ಪ್ರಗತಿ ವೇಗ ಪಡೆಯಲು ಕೆಲ ದಿನಗಳು ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.

ಮುಂಗಾರು ಮಾರುತದ ಅರಬ್ಬಿ ಸಮುದ್ರ ಶಾಖೆ ಮೇ 30-31ರ ವೇಳೆಗೆ ಪ್ರಬಲವಾಗುವ ಸಾಧ್ಯತೆಯಿದ್ದು, ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟಚಿತ್ರಣ ಸಿಗಲಿದೆ ಎಂದು ಐಎಂಡಿ ಹವಾಮಾನ ಮುನ್ಸೂಚನೆ ವಿಭಾಗದ ಮುಖ್ಯಸ್ಥ ಅನುಪಮ್ ಕಶ್ಯಪಿ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News