ಆಂಧ್ರ: ಜಿನ್ನಾ ಟವರ್ ಸೆಂಟರ್‌ ಮರುನಾಮಕರಣಕ್ಕೆ ಬಿಜೆಪಿ ಪ್ರತಿಭಟನೆ, ಹಲವು ನಾಯಕರ ಬಂಧನ

Update: 2022-05-25 04:40 GMT
Photo: ANI

ಅಮರಾವತಿ: ಜಿನ್ನಾ ಟವರ್ ಸೆಂಟರ್‌ಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಮಂಗಳವಾರ ಸಂಜೆ ಗುಂಟೂರಿನ ಜಿನ್ನಾ ಟವರ್ ಸೆಂಟರ್‌ಗೆ ಮೆರವಣಿಗೆ ನಡೆಸಲು ಯತ್ನಿಸಿದ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಸುನೀಲ್ ದೇವಧರ್ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪಕ್ಷದ ಯುವ ಘಟಕ ಬಿಜೆವೈಎಂ ಸಭೆಯ ನಂತರ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜಿನ್ನಾ ಟವರ್‌ಗೆ ಪ್ರತಿಭಟನಾ ಮೆರವಣಿಗೆಯನ್ನು  ನಡೆಸಲು ಪ್ರಯತ್ನಿಸಿದರು.  ಆದರೆ ಪೊಲೀಸರು ಅದನ್ನು ವಿಫಲಗೊಳಿಸಿದರು ಹಾಗೂ ಎಲ್ಲರನ್ನು ಬಂಧಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಬಿಜೆಪಿ ಹಾಗೂ  ಇತರ ಸಂಘಪರಿವಾರದ ಸಂಘಟನೆಗಳು ಐತಿಹಾಸಿಕ ಜಿನ್ನಾ ಗೋಪುರಕ್ಕೆ ಮರುನಾಮಕರಣ ಮಾಡಬೇಕೆಂದು ಒತ್ತಾಯಿಸುತ್ತಿದ್ದರೂ ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರಕಾರ ಅದರತ್ತ ಗಮನ ಹರಿಸಿರಲಿಲ್ಲ.

ಮಂಗಳವಾರ  ರಾಜ್ಯದ ಪಕ್ಷದ ಸಹ-ಪ್ರಭಾರಿ  ಸುನೀಲ್ ದೇವಧರ್ ನಗರದಲ್ಲಿದ್ದು ಪ್ರತಿಭಟನೆಯ ನೇತೃತ್ವ ವಹಿಸಲು ಪ್ರಯತ್ನಿಸಿದರು. ಜಿನ್ನಾ ಟವರ್ ಅನ್ನು ಎಪಿಜೆ ಅಬ್ದುಲ್ ಕಲಾಂ ಟವರ್ ಎಂದು ಮರುನಾಮಕರಣ ಮಾಡಬೇಕೆಂದು ಬಿಜೆಪಿ ಒತ್ತಾಯಿಸಿದೆ.

ಬಿಜೆಪಿಯ ರಾಜ್ಯಸಭಾ ಸದಸ್ಯ ಜಿವಿಎಲ್ ನರಸಿಂಹ ರಾವ್ ಅವರು ತಮ್ಮ ಪಕ್ಷದ ನಾಯಕರ ವಿರುದ್ಧ ಪೊಲೀಸರ ವರ್ತನೆ ಹಾಗೂ ಅವರ ಬಂಧನವನ್ನು ಖಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News