ಚೆನ್ನೈನಲ್ಲಿ ಬಿಜೆಪಿ ನಾಯಕನ ಹತ್ಯೆ: ವೈಯಕ್ತಿಕ ದ್ವೇಷದ ಶಂಕೆ ವ್ಯಕ್ತಪಡಿಸಿದ ಪೊಲೀಸರು
ಚೆನ್ನೈ: ತಮಿಳುನಾಡು ಬಿಜೆಪಿಯ ಎಸ್‌ಸಿ/ಎಸ್‌ಟಿ ವಿಭಾಗದ ಕೇಂದ್ರ ಜಿಲ್ಲಾಧ್ಯಕ್ಷ ಬಾಲಚಂದ್ರನ್ ಅವರನ್ನು ಮೂವರು ಅಪರಿಚಿತ ದುಷ್ಕರ್ಮಿಗಳು ಮಂಗಳವಾರ ತಮಿಳುನಾಡಿನ ಚೆನ್ನೈನ ಚಿಂತಾದ್ರಿಪೇಟ್‌ನಲ್ಲಿ ಹತ್ಯೆಗೈದಿದ್ದಾರೆ.
ಮೂಲಗಳ ಪ್ರಕಾರ ತನಗೆ ಬೆದರಿಕೆ ಇದೆ ಎಂಬ ಕುರಿತು ಶಂಕೆ ವ್ಯಕ್ತಪಡಿಸಿದ್ದ ಬಾಲಚಂದ್ರನ್ ಅವರಿಗೆ ರಾಜ್ಯ ಸರಕಾರವು ವೈಯಕ್ತಿಕ ಭದ್ರತಾ ಅಧಿಕಾರಿಯನ್ನು (ಪಿಎಸ್‌ಒ) ಒದಗಿಸಿದೆ. ಪಿಎಸ್‌ಒ ಚಹಾ ಕುಡಿಯಲು ಹೋಗಿದ್ದಾಗ ಬಿಜೆಪಿ ನಾಯಕನನ್ನು ಕೊಲ್ಲಲಾಗಿದೆ.
ಮೂವರು ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮಾಹಿತಿ ಲಭಿಸಿದೆ.
"ಇದು ಪೂರ್ವ ದ್ವೇಷದಿಂದ ಕೂಡಿರುವ ಕೊಲೆ ಪ್ರಕರಣವಾಗಿದೆ. ಘಟನೆಯ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾತನಾಡಿದ್ದಾರೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದೇವೆ. ಯಾವುದೇ ರೀತಿಯ ಭದ್ರತಾ ಲೋಪವಾಗಿದೆಯೇ ಎಂದು ನೋಡಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಬಾಲಚಂದ್ರನ್ ಸಾವಿನ ಕುರಿತು ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಹೇಳಿದ್ದಾರೆ.