ಕಚ್ಚಾ ಸೋಯಾಬೀನ್, ಸೂರ್ಯಕಾಂತಿ ಎಣ್ಣೆಯ ಸುಂಕ ಮುಕ್ತ ಆಮದಿಗೆ ಕೇಂದ್ರ ಸರ್ಕಾರ ಅನುಮತಿ

Update: 2022-05-25 12:05 GMT

ಹೊಸದಿಲ್ಲಿ: ಏರುತ್ತಿರುವ ಆಹಾರ ಬೆಲೆಗಳನ್ನು ನಿಯಂತ್ರಿಸಲು, ಭಾರತವು  ಮಾರ್ಚ್ 2024 ರವರೆಗೆ ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಗಳ ಸುಂಕ-ಮುಕ್ತ ಆಮದುಗಳನ್ನು ಸೀಮಿತ ಪ್ರಮಾಣದಲ್ಲಿ ಅನುಮತಿಸಲಿದೆ ಎಂದು ಕೇಂದ್ರ ಸರ್ಕಾರವು ಘೋಷಿಸಿದೆ. ಆಮದು ಸುಂಕದಲ್ಲಿನ ಈ ವಿನಾಯಿತಿಯು ದೇಶೀಯ ಬೆಲೆಗಳನ್ನು ತಗ್ಗಿಸುತ್ತದೆ ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಸರ್ಕಾರ ನಂಬುತ್ತದೆ.

ಮಂಗಳವಾರ ಕೇಂದ್ರ ಸರ್ಕಾರವು 20 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆಯ ಆಮದುಗಳಿಗೆ ಕಸ್ಟಮ್ಸ್ ಸುಂಕ ಮತ್ತು ಕೃಷಿ ಮೂಲಸೌಕರ್ಯ ಅಭಿವೃದ್ಧಿ ಸೆಸ್‌ನಿಂದ ವಿನಾಯಿತಿ ನೀಡಿದೆ.  2022-23, 2023-24 ಈ ಎರಡು ಹಣಕಾಸು ವರ್ಷಗಳಲ್ಲಿ ವಿನಾಯಿತಿ ಅನ್ವಯಿಸುತ್ತದೆ ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ಹೇಳಿದೆ.  

ಈ ನಿರ್ಧಾರವು ಗ್ರಾಹಕರಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ ಎಂದು ಕಸ್ಟಮ್ಸ್ ಕೇಂದ್ರೀಯ ಮಂಡಳಿ (ಸಿಬಿಐಸಿ) ತನ್ನ ಟ್ವೀಟ್‌ನಲ್ಲಿ ಬರೆದಿದೆ. ದೇಶೀಯ ಬೆಲೆಗಳು ಮತ್ತು ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಉಕ್ಕು ಮತ್ತು ಪ್ಲಾಸ್ಟಿಕ್ ಉದ್ಯಮದ ಕೆಲವು ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಸಹ ಮನ್ನಾ ಮಾಡಿದೆ. ಅದೇ ಸಮಯದಲ್ಲಿ, ಕಬ್ಬಿಣದ ಅದಿರು ಮತ್ತು ಕಬ್ಬಿಣದ ಉಂಡೆಗಳ ಮೇಲಿನ ರಫ್ತು ಸುಂಕವನ್ನು ಹೆಚ್ಚಿಸಲಾಗಿದೆ. ಕಳೆದ ವಾರವಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News