ಉಕ್ರೇನ್: ಕಟ್ಟಡದ ನೆಲಮಾಳಿಗೆಯಲ್ಲಿ 200 ಮೃತದೇಹ ಪತ್ತೆ‌

Update: 2022-05-25 16:26 GMT
Photo: Twitter/@Join1440

ಕೀವ್, ಮೇ 25: ರಶ್ಯದ ತೀವ್ರ ವಾಯುದಾಳಿಗೆ ಗುರಿಯಾಗಿದ್ದ ಉಕ್ರೇನ್ನ ಮರಿಯುಪೋಲ್ ನಗರದಲ್ಲಿ ಭಗ್ನಾವಶೇಷಗೊಂಡ ಕಟ್ಟಡದ ನೆಲಮಾಳಿಗೆಯಲ್ಲಿ 200 ಮೃತದೇಹ ಪತ್ತೆಯಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಬಾಂಬ್ ದಾಳಿಗೆ ಕುಸಿದುಬಿದ್ದಿದ್ದ ಅಪಾರ್ಟ್‌ಮೆಂಟ್‌ನ ಅವಶೇಷಗಳನ್ನು ತೆರವುಗೊಳಿಸುವ ಸಂದರ್ಭ ಮೃತದೇಹ ಪತ್ತೆಯಾಗಿದೆ. ಇವು ಸಂಪೂರ್ಣ ಕೊಳೆತುಹೋದ ಸ್ಥಿತಿಯಲ್ಲಿದ್ದು ದುರ್ವಾಸನೆ ಹಲವು ದೂರ ವ್ಯಾಪಿಸಿತ್ತು ಎಂದು ನಗರದ ಮೇಯರ್ ಅವರ ಸಲಹೆಗಾರರು ಹೇಳಿದ್ದಾರೆ. ಆಯಕಟ್ಟಿನ ಬಂದರು ನಗರ ಮರಿಯುಪೋಲ್ ವಶಪಡಿಸಿಕೊಳ್ಳಲು ರಶ್ಯ ಸುಮಾರು 3 ತಿಂಗಳು ನಿರಂತರ ದಾಳಿ ನಡೆಸಿತ್ತು. ಸುಮಾರು 4,50,000 ಜನಸಂಖ್ಯೆಯಿದ್ದ ನಗರದಲ್ಲಿ ಈಗ ಅಂದಾಜಿ 1 ಲಕ್ಷ ಜನ ಮಾತ್ರ ನೆಲೆಸಿದ್ದು ಉಳಿದವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ರಶ್ಯದ ದಾಳಿಯಲ್ಲಿ ಕನಿಷ್ಟ 21,000 ಜನತೆ ಮೃತಪಟ್ಟಿದ್ದು, ಮೃತಪಟ್ಟವರ ಮಾಹಿತಿಯನ್ನು ರಹಸ್ಯವಾಗಿಡಲು ರಶ್ಯ ಮೃತದೇಹಗಳ ಸಾಮೂಹಿಕ ಸಮಾಧಿ ನಡೆಸುತ್ತಿದೆ ಎಂದು ಉಕ್ರೇನ್ ಆರೋಪಿಸಿದೆ.

   ಈ ಮಧ್ಯೆ, ಪೂರ್ವ ಉಕ್ರೇನ್‌ನ ಕೈಗಾರಿಕಾ ವಲಯ ಡೊನ್ಬಾಸ್ನಲ್ಲಿ ರಶ್ಯ ಪಡೆಯ ಆಕ್ರಮಣ ತೀವ್ರಗೊಂಡಿದ್ದು ಪ್ರಮುಖ ನಗರ ಸೀವಿರೊಡೊನೆಟ್ಸ್ಕ್  ಮತ್ತು ನೆರೆಯ ನಗರಗಳಿಗೆ ಮುತ್ತಿಗೆ ಹಾಕಿವೆ ಎಂದು ವರದಿಯಾಗಿದೆ. ಡೊನ್ಬಾಸ್ ವಲಯದಲ್ಲಿ ರಶ್ಯ ಬೆಂಬಲಿತ ಪ್ರತ್ಯೇಕತಾವಾದಿಗಳು ಕಳೆದ 8 ವರ್ಷದಿಂದ ಉಕ್ರೇನ್ ವಿರುದ್ಧ ಸಂಘರ್ಷದಲ್ಲಿ ನಿರತರಾಗಿದ್ದು ಈ ಪ್ರಾಂತದ ಬಹುತೇಕ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿದೆ. ಆದರೆ ಸೀವಿರೊಡೊನೆಟ್ಸ್ಕ್ ಮತ್ತು ನೆರೆಯ ನಗರ ಮಾತ್ರ ಈಗಲೂ ಉಕ್ರೇನ್ ಸರಕಾರದ ನಿಯಂತ್ರಣದಲ್ಲಿದೆ. ಆಗ್ನೇಯದಲ್ಲಿರುವ ಆಯಕಟ್ಟಿನ ಪ್ರಮುಖ ನಗರ ಕ್ರಮಟೊರ್‌ಸ್ಕ್‌ನಿಂದ ಸುಮಾರು 50 ಕಿ.ಮೀ ದೂರದ ಸ್ವಿಟ್ಲೊಡಾರ್ಸ್ಕ್ ನಗರವನ್ನು ರಶ್ಯ ಸೇನೆ ವಶಪಡಿಸಿಕೊಂಡಿದ್ದು ಅಲ್ಲಿ ರಶ್ಯದ ಧ್ವಜವನ್ನು ಹಾರಿಸಿದೆ ಎಂದು ಉಕ್ರೇನ್‌ನ ಮಾಧ್ಯಮ ವರದಿ ಮಾಡಿದೆ.

 ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯ ಸೇನೆಗೆ ಯೋಜಿತ ರೀತಿಯಲ್ಲಿ ಮುನ್ನಡೆ ಸಾಧ್ಯವಾಗುತ್ತಿಲ್ಲ ಎಂಬ ವರದಿಗೆ ಪ್ರತಿಕ್ರಿಯಿಸಿರುವ ರಶ್ಯದ ರಕ್ಷಣಾ ಸಚಿವ ಸೆರ್ಗೈ ಶೊಯಿಗು, ನಾಗರಿಕರ ಸುರಕ್ಷಿತ ತೆರವಿಗೆ ಅನುವು ಮಾಡಿಕೊಡಲು ನಿಧಾನಗತಿಯಲ್ಲಿ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News