ಜ್ಞಾನವಾಪಿ ಪ್ರಕರಣ: ಅರ್ಜಿಯನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿದ ಜಿಲ್ಲಾ ನ್ಯಾಯಾಲಯ

Update: 2022-05-25 18:06 GMT

ವಾರಣಾಸಿ, ಮೇ 25: ವೀಡಿಯೊ ಸರ್ವೇ ಸಂದರ್ಭ ಜ್ಞಾನವಾಪಿ ಸಂಕೀರ್ಣದಲ್ಲಿ ಪತ್ತೆಯಾಗಿದೆ ಎಂದು ಪ್ರತಿಪಾದಿಸುತ್ತಿರುವ ಶಿವಲಿಂಗವನ್ನು ಆರಾಧಿಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಬುಧವಾರ ಇಲ್ಲಿನ ಜಿಲ್ಲಾ ನ್ಯಾಯಾಲಯ ಮೇ 30ರಂದು ವಿಚಾರಣೆ ನಡೆಸಲು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಿದೆ.

ಈ ಅರ್ಜಿಯನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಲು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎ.ಕೆ. ವಿಶೇಷ ಅವರು ಆದೇಶಿಸಿದ್ದಾರೆ ಎಂದು ಸರಕಾರದ ಪರ ನ್ಯಾಯವಾದಿ ರಾಣಾ ಸಂಜೀವ ಸಿಂಗ್ ಅವರು ಹೇಳಿದ್ದಾರೆ. ವಿಶ್ವ ವೇದಿಕ್ ಸನಾತನ ಸಂಘದ ಪರವಾಗಿ ಈ ಮನವಿ ಸಲ್ಲಿಸಲಾಗಿದೆ. ಸಂಘದ ಅಧ್ಯಕ್ಷ ಜಿತೇಂದ್ರ ಸಿಂಗ್ ಬಿಸೇನ್ ಅವರ ಪತ್ನಿ ಕಿರಣ್ ಸಿಂಗ್ ಹಾಗೂ ಅದರ ಪ್ರಧಾನ ಕಾರ್ಯದರ್ಶಿ ಮಂಗಳವಾರ ಮನವಿ ಸಲ್ಲಿಸಿ, ಸಂಕೀರ್ಣದ ಒಳಗೆ ಮುಸ್ಲಿಮರ ಪ್ರವೇಶ ನಿಷೇಧಿಸಬೇಕು ಹಾಗೂ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿದ್ದರು.

ಪ್ರಕರಣದ ಮೂರನೇ ಅಂಶವಾದ ಶಿವಲಿಂಗಕ್ಕೆ ಪ್ರಾರ್ಥನೆ ಸಲ್ಲಿಸಲು ದೂರುದಾರರು ಅನುಮತಿ ಕೋರಿದ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯ ಬುಧವಾರ ಒಪ್ಪಿಕೊಂಡಿದೆ. ಸುಪ್ರೀಂ ಕೋರ್ಟ್ನ ನಿರ್ದೇಶನದಲ್ಲಿ ಜ್ಞಾನವಾಪಿ-ಶೃಂಗಾರ್ ಗೌರಿ ಪ್ರಕರಣದ ಸ್ವೀಕಾರಾರ್ಹತೆಯ ಕುರಿತ ವಿಚಾರಣೆಯನ್ನು ನ್ಯಾಯಾಧೀಶರು ಮಂಗಳವಾರ ಮೇ 26ಕ್ಕೆ ನಿಗದಿಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News