ನಾಲ್ಕು ಐಪಿಎಲ್ ಟೂರ್ನಿಗಳಲ್ಲಿ 600ಕ್ಕೂ ಅಧಿಕ ರನ್ ಕಲೆ ಹಾಕಿದ ಮೊದಲ ಆಟಗಾರ ಕೆ.ಎಲ್.ರಾಹುಲ್
ಕೋಲ್ಕತಾ, ಮೇ 26: ಐಪಿಎಲ್ ಇತಿಹಾಸದಲ್ಲಿ ನಾಲ್ಕು ಐಪಿಎಲ್ ಟೂರ್ನಿಗಳಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ ಮೊತ್ತ ಮೊದಲ ಆಟಗಾರನಾಗಿ ಲಕ್ನೊ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್.ರಾಹುಲ್ ಹೊರಹೊಮ್ಮಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಬುಧವಾರ ಈಡನ್‌ಗಾರ್ಡನ್ಸ್‌ನಲ್ಲಿ ನಡೆದ ಆರ್‌ಸಿಬಿ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ರಾಹುಲ್ ಈ ಸಾಧನೆ ಮಾಡಿದ್ದಾರೆ. ಆರ್‌ಸಿಬಿ ವಿರುದ್ಧ 58 ಎಸೆತಗಳಲ್ಲಿ 79 ರನ್ ಗಳಿಸಿದಾಗ ಬ್ಯಾಟಿಂಗ್‌ನಲ್ಲಿ ಈ ಅಪೂರ್ವ ಮೈಲಿಗಲ್ಲು ತಲುಪಿದರು.
ಬಲಗೈ ಬ್ಯಾಟರ್ ರಾಹುಲ್ 2022ರ ಐಪಿಎಲ್‌ನಲ್ಲಿ 15 ಪಂದ್ಯಗಳಲ್ಲಿ ಒಟ್ಟು 661 ರನ್ ಗಳಿಸಿದ್ದಾರೆ. ಈ ವರ್ಷದ ಐಪಿಎಲ್‌ಗಿಂತ ಮೊದಲು 2021ರ ಆವೃತ್ತಿಯಲ್ಲಿ 13 ಪಂದ್ಯಗಳಲ್ಲಿ 626 ರನ್ ಗಳಿಸಿದ್ದರು. 2020ರ ಋತುವಿನಲ್ಲಿ 14 ಪಂದ್ಯಗಳಲ್ಲಿ 670 ರನ್ ಹಾಗೂ 2018ರ ಆವೃತ್ತಿಯ ಟೂರ್ನಿಯಲ್ಲಿ 659 ರನ್ ಕಲೆ ಹಾಕಿದ್ದರು.
ವೆಸ್ಟ್‌ಇಂಡೀಸ್ ಬ್ಯಾಟಿಂಗ್ ದಂತಕತೆ ಕ್ರಿಸ್ ಗೇಲ್ ಹಾಗೂ ಆಸ್ಟ್ರೇಲಿಯದ ಓಪನರ್ ಡೇವಿಡ್ ವಾರ್ನರ್ ಐಪಿಎಲ್‌ನ ಮೂರು ವಿಭಿನ್ನ ಋತುವಿನಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ್ದರು. ಗೇಲ್ ಆರ್‌ಸಿಬಿ ಪರ ಸತತ ಮೂರು ವರ್ಷ(2011, 2012, 2013)600ಕ್ಕೂ ಅಧಿಕ ರನ್ ಗಳಿಸಿದ್ದರು. ಮತ್ತೊಂದೆಡೆ ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ನಾಯಕನಾಗಿ 2016(848 ರನ್), 2017 (641 ರನ್)ಹಾಗೂ 2019ರಲ್ಲಿ (692)ಈ ಸಾಧನೆ ಮಾಡಿದ್ದರು.