×
Ad

ಇರಾನ್ ಯೋಧನ ಹತ್ಯೆಯ ಹೊಣೆ ಹೊತ್ತ ಇಸ್ರೇಲ್: ವರದಿ

Update: 2022-05-26 23:41 IST

ನ್ಯೂಯಾರ್ಕ್, ಮೇ 26: ಇರಾನ್‌ನ ರಾಜಧಾನಿ ಟೆಹ್ರಾನ್ ಬಳಿ ರವಿವಾರ ರೆವೊಲ್ಯೂಷನರಿ ಗಾರ್ಡ್ಸ್(ಇರಾನ್ ಸಶಸ್ತ್ರ ದಳದ ಒಂದು ವಿಭಾಗ)ನ ಸದಸ್ಯನ ಹತ್ಯೆಯ ಹೊಣೆಯನ್ನು ಹೊರುವುದಾಗಿ ಇಸ್ರೇಲ್ ಅಮೆರಿಕಕ್ಕೆ ತಿಳಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಬುಧವಾರ ವರದಿ ಮಾಡಿದೆ.

ಟೆಹ್ರಾನ್‌ನಲ್ಲಿರುವ ತನ್ನ ಮನೆಯ ಹೊರಗೆ ಕುಳಿತಿದ್ದ ರೆವೊಲ್ಯೂಷನರಿ ಗಾರ್ಡ್ಸ್‌ನ ಕರ್ನಲ್ ಸಯ್ಯದ್ ಖೊಡಾಯ್ ಮೇಲೆ ಬೈಕಿನಲ್ಲಿ ಆಗಮಿಸಿದ ವ್ಯಕ್ತಿ ಗುಂಡು ಹಾರಿಸಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಹತ್ಯೆಗೆ ಪ್ರತೀಕಾರ ತೀರಿಸುವುದಾಗಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಘೋಷಿಸಿದ್ದಾರೆ. ಜಾಗತಿಕ ದುರಹಂಕಾರಿಗಳಿಗೆ (ಅಮೆರಿಕ ಮತ್ತದರ ಮಿತ್ರಪಕ್ಷಗಳನ್ನು ಪರೋಕ್ಷವಾಗಿ ಉಲ್ಲೇಖಿಸಿ) ಸಂಬಂಧಿಸಿದ ದುಷ್ಟಶಕ್ತಿಗಳು ನಡೆಸಿದ ಭಯೋತ್ಪಾದಕ ಕೃತ್ಯ ಇದಾಗಿದೆ ಎಂದು ರೆವೊಲ್ಯೂಷನರಿ ಗಾರ್ಡ್ಸ್‌ನ ವೆಬ್‌ಸೈಟ್‌ನಲ್ಲಿ ಹೇಳಿಕೆ ಪೋಸ್ಟ್ ಮಾಡಲಾಗಿತ್ತು.

ಈ ಹತ್ಯೆಯ ಹಿಂದೆ ತಾನು ಇರುವುದಾಗಿ ಇಸ್ರೇಲ್ ಅಮೆರಿಕಕ್ಕೆ ಮಾಹಿತಿ ನೀಡಿದೆ. ರೆವೊಲ್ಯೂಷನರಿ ಗಾರ್ಡ್ಸ್‌ನ ವಿದೇಶಿ ಘಟಕ ಖುಡ್ಸ್ ಪಡೆಯೊಳಗಿನ ರಹಸ್ಯ ಗುಂಪಿನ ಕಾರ್ಯಾಚರಣೆಯನ್ನು ಅಂತ್ಯಗೊಳಿಸಲು ಇರಾನ್‌ಗೆ ನೀಡಿದ ಎಚ್ಚರಿಕೆಯ ಸಂದೇಶ ಇದಾಗಿದೆ ಎಂದು ಇಸ್ರೇಲ್ ಹೇಳಿರುವುದಾಗಿ ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರ್ನಲ್ ಸಯ್ಯದ್ ಖೊಡಾಯ್ ಖುಡ್ಸ್ ಪಡೆಯ ಸದಸ್ಯ ಎಂದು ಇರಾನ್ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News