ನಾನು ಸಿಬಿಐನಿಂದ ತೀವ್ರ ಕಾನೂನುಬಾಹಿರ ಕ್ರಮಕ್ಕೆ ಬಲಿಯಾಗಿದ್ದೇನೆ: ಲೋಕಸಭಾ ಸ್ಪೀಕರ್ ಗೆ ಪತ್ರ ಬರೆದ ಕಾರ್ತಿ ಚಿದಂಬರಂ

Update: 2022-05-27 07:45 GMT

ಹೊಸದಿಲ್ಲಿ: ಕಳೆದ ವಾರ ನಡೆದ ದಾಳಿಯ ವೇಳೆ ಕೆಲಸದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದ ಕೇಂದ್ರ ತನಿಖಾ ದಳ (ಸಿಬಿಐ) ನಾನು ಸಂಸದನಾಗಿ ಹೊಂದಿರುವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಆರೋಪಿಸಿ ದ್ದಾರೆ.

"ನಾನು ತೀವ್ರ ಕಾನೂನುಬಾಹಿರ ಹಾಗೂ  ಅಸಾಂವಿಧಾನಿಕ ಕ್ರಮಕ್ಕೆ ಬಲಿಯಾಗಿದ್ದೇನೆ. ಕೇಂದ್ರೀಯ ತನಿಖಾ ದಳವು ನಾನು ಸ್ವಲ್ಪವೂ ಭಾಗಿಯಾಗಿಲ್ಲದ ಭಾರತ ಸರಕಾರದ 11 ವರ್ಷಗಳ ಹಿಂದಿನ ನಿರ್ಧಾರದ ಬಗ್ಗೆ ತನಿಖೆ ನಡೆಸುವ ನೆಪದಲ್ಲಿ ದಿಲ್ಲಿಯಲ್ಲಿರುವ  ನನ್ನ ನಿವಾಸದ ಮೇಲೆ ದಾಳಿ ನಡೆಸಿದೆ" ಎಂದು ಅವರು ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

"ಈ ತಥಾಕಥಿತ ದಾಳಿಯ ಸಂದರ್ಭದಲ್ಲಿ ಸಿಬಿಐನ ಕೆಲವು ಅಧಿಕಾರಿಗಳು ನನ್ನ ಅತ್ಯಂತ ಗೌಪ್ಯ ಹಾಗೂ  ಸೂಕ್ಷ್ಮ ವೈಯಕ್ತಿಕ ಬರಹಗಳು, ನಾನು ಸದಸ್ಯನಾಗಿರುವ ಮಾಹಿತಿ ಹಾಗೂ  ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಗೆ ಸಂಬಂಧಿಸಿದ ಕಾಗದಪತ್ರಗಳನ್ನು ವಶಪಡಿಸಿಕೊಂಡರು" ಎಂದು ಕಾರ್ತಿ  ಚಿದಂಬರಂ ಹೇಳಿದರು.

"ಅಚ್ಚರಿಯ ವಿಚಾರವೆಂದರೆ  ನನ್ನ ಕರಡು ಬರಹಗಳು ಹಾಗೂ  ನಾನು ಸಮಿತಿಗೆ ಸಮನ್ಸ್ ನೀಡಿದ್ದ ಸಾಕ್ಷಿಗಳನ್ನು ಕೇಳಲು ಉದ್ದೇಶಿಸಿರುವ ಪ್ರಶ್ನೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಸಾಕ್ಷಿಗಳು ಸಮಿತಿಗೆ ಸಲ್ಲಿಸಿದ ಠೇವಣಿಗಳಿಗೆ ಸಂಬಂಧಿಸಿದ ನನ್ನ ಕೈಬರಹದ ಟಿಪ್ಪಣಿಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ " ಎಂದು ಅವರು ಹೇಳಿದರು.

"ಸಂಸದನಾಗಿ ನನ್ನ ಕರ್ತವ್ಯಗಳಲ್ಲಿ ಹಸ್ತಕ್ಷೇಪಕ್ಕೆ ಸಂಬಂಧಿಸಿದಂತೆ ಸಿಬಿಐನ ಈ ಕ್ರಮಗಳು  ನಮ್ಮ ಸಂಸತ್ತು ಸ್ಥಾಪಿಸಿರುವ ಪ್ರಜಾಸತ್ತಾತ್ಮಕ ತತ್ವಗಳ ಮೇಲೆ ನೇರವಾದ ಆಕ್ರಮಣಕ್ಕೆ ಸಮಾನವಾಗಿದೆ. ಆದ್ದರಿಂದ, ಈ ವಿಷಯದ ಬಗ್ಗೆ ತಕ್ಷಣ ಗಮನಹರಿಸಬೇಕು ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ಇದು ನನ್ನ ಸಂಸದೀಯ ವಿಶೇಷಾಧಿಕಾರದ ಉಲ್ಲಂಘನೆಯಾಗಿದೆ ”ಎಂದು ಕಾಂಗ್ರೆಸ್ ನಾಯಕ  ಸ್ಪೀಕರ್ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News