ರಾಜೀನಾಮೆಗೆ ಮುಂದಾದ ಆಪ್ತ ಸಚಿವ: ಇದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದ ರಾಜಸ್ಥಾನ ಸಿಎಂ

Update: 2022-05-27 09:47 GMT

ಜೈಪುರ: ತಮ್ಮ ಆಪ್ತ ಸಚಿವರೊಬ್ಬರು ಸಿಟ್ಟಿಗೆದ್ದು  ರಾಜೀನಾಮೆಯ ಕುರಿತು ಟ್ವೀಟ್ ಮಾಡಿದ ಕೆಲವೇ ಗಂಟೆಗಳ ನಂತರ ಪ್ರತಿಕ್ರಿಯಿಸಿರುವ  ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದನ್ನು "ಗಂಭೀರವಾಗಿ ತೆಗೆದುಕೊಳ್ಳಬಾರದು" ಎಂದು ಹೇಳಿದ್ದಾರೆ.

ರಾಜಸ್ಥಾನದ ಕ್ರೀಡೆ ಹಾಗೂ  ಯುವ ವ್ಯವಹಾರಗಳು, ಕೌಶಲ್ಯಾಭಿವೃದ್ಧಿ, ಉದ್ಯೋಗ, ಉದ್ಯಮಶೀಲತೆ ಹಾಗೂ  ವಿಪತ್ತು ನಿರ್ವಹಣೆ ಸಚಿವ ಅಶೋಕ್ ಚಂದನ ಅವರು  ನನ್ನನು ಸಚಿವ ಸ್ಥಾನದಿಂದ "ಮುಕ್ತಗೊಳಿಸಿ" ಹಾಗೂ ತನ್ನ  ಎಲ್ಲಾ ಇಲಾಖೆಗಳನ್ನು ಮುಖ್ಯಮಂತ್ರಿಯ ಪ್ರಧಾನ ಕಾರ್ಯದರ್ಶಿ ಕುಲದೀಪ್ ರಾಂಕಾ ಅವರಿಗೆ ನೀಡುವಂತೆ ಅಶೋಕ್ ಗೆಹ್ಲೋಟ್  ಅವರಿಗೆ ಮನವಿ ಮಾಡಿದ್ದರು.

"ಅಶೋಕ್ ಚಂದನ  ಅವರು ತುಂಬಾ ಒಳ್ಳೆಯ ಮಂತ್ರಿ. ಅವರು ಇತ್ತೀಚೆಗೆ ಬಹಳ ವಿಸ್ತಾರವಾದ ಕ್ರೀಡಾ ಸ್ಪರ್ಧೆಯನ್ನು ಆಯೋಜಿಸಿದ್ದಾರೆ. ಅವರು ಬಹಳಷ್ಟು ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ.  ಬಹುಶಃ ಅವರು ಸ್ವಲ್ಪ ಉದ್ವೇಗದಲ್ಲಿದ್ದಾರೆ ಹಾಗು ಏನೋ  ಹೇಳಿದ್ದಾರೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು" ಎಂದು ಗೆಹ್ಲೋಟ್ ಇಂದು ಬೆಳಿಗ್ಗೆ ಸುದ್ದಿಗಾರರಿಗೆ ತಿಳಿಸಿದರು. 

"ನಾನು ಶೀಘ್ರದಲ್ಲೇ ಅವರೊಂದಿಗೆ ಮಾತನಾಡುತ್ತೇನೆ ಹಾಗೂ ಅವರ ಸಮಸ್ಯೆಯತ್ತ ನೋಡುತ್ತೇನೆ. ನಾನು ಅವರೊಂದಿಗೆ ಇನ್ನೂ ಮಾತನಾಡಿಲ್ಲ.  ಆದ್ದರಿಂದ ನನಗೆ ವಿಚಾರ ಗೊತ್ತಿಲ್ಲ. ಅವರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ಗೆಹ್ಲೋಟ್  ಹೇಳಿದರು.

ಗೆಹ್ಲೋಟ್ ಅವರ ತಂಡದ ಅಧಿಕಾರಿ ಕುಲದೀಪ್ ರಾಂಕಾ ಅವರೊಂದಿಗೆ ಅಶೋಕ್ ಚಂದನ  ಅಸಮಾಧಾನಗೊಂಡಿದ್ದಾರೆ ಎಂದು ನಂಬಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News