ಆರ್ಯನ್‌ ಖಾನ್‌ ಬಂಧನ ಪ್ರಕರಣ: ತನಿಖಾಧಿಕಾರಿ ಸಮೀರ್‌ ವಾಂಖೆಡೆ ವಿರುದ್ಧ ಕ್ರಮ ಸಾಧ್ಯತೆ

Update: 2022-05-27 11:13 GMT

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನನ್ನು ಬಂಧಿಸಿರುವ ಎನ್ ಸಿಬಿ ಮಾಜಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳನ್ನುಲ್ಲೇಖಿಸಿ NDTV ವರದಿ ಮಾಡಿದೆ.

ಮಾದಕ ದ್ರವ್ಯ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಅವರ ಕಳಪೆ ತನಿಖೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವು ಸಕ್ಷಮ ಪ್ರಾಧಿಕಾರವನ್ನು ಕೇಳಿದೆ. ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಚಾರ್ಜ್‌ಶೀಟ್‌ನಲ್ಲಿ ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡಿದ ನಂತರ, ವಾಂಖೆಡೆ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ನಕಲಿ ಜಾತಿ ಪ್ರಮಾಣ ಪತ್ರ ಪ್ರಕರಣದಲ್ಲಿ ಸಮೀರ್ ವಾಂಖೆಡೆ ವಿರುದ್ಧ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ.

 ಎನ್‌ಸಿಬಿ ಶುಕ್ರವಾರ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಅನ್ನು ಸಲ್ಲಿಸಿದ್ದು, ಇದರಲ್ಲಿ ಆರ್ಯನ್ ಖಾನ್ ಹೆಸರಿರಲಿಲ್ಲ. ಆರ್ಯನ್ ಖಾನ್‌ಗೆ ಕ್ಲೀನ್ ಚಿಟ್ ನೀಡುವ ಬಗ್ಗೆ ಮಾತನಾಡಿದ ಎನ್‌ಸಿಬಿ ಡಿಜಿ ಎಸ್‌ಎನ್ ಪ್ರಧಾನ್, ತನಿಖಾಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ಮತ್ತು ಅವರ ತಂಡವು ಈ ಪ್ರಕರಣದಲ್ಲಿ ತಪ್ಪು ಮಾಡಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.  

ಕ್ರೂಸ್ ಶಿಪ್ ನಲ್ಲಿ ಡ್ರಗ್ ಪತ್ತೆ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಶುಕ್ರವಾರ ಕ್ಲೀನ್ ಚಿಟ್ ನೀಡಲಾಗಿದೆ. ಈ ಪ್ರಕರಣದಲ್ಲಿ ಕಳೆದ ವರ್ಷ ಅವರನ್ನು ಬಂಧಿಸಲಾಗಿತ್ತು. ಮುಂಬೈ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿರುವ ಎನ್‌ಸಿಬಿ ಅಧಿಕಾರಿಗಳು, "ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ" ಆರ್ಯನ್ ಖಾನ್ ಮತ್ತು ಇತರ ಐವರನ್ನು ಪ್ರಕರಣದಲ್ಲಿ ಹೆಸರಿಸಲಾಗಿಲ್ಲ ಎಂದು ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರ್ಯನ್ ಖಾನ್ 28 ದಿನಗಳ ಕಾಲ ಜೈಲಿನಲ್ಲಿ ಇರಬೇಕಾಗಿ ಬಂದಿತ್ತು. ಆರ್ಯನ್‌ ಖಾನ್‌ ಬಂಧನವು ದೇಶಾದ್ಯಂತ ಗಮನ ಸೆಳೆದಿದ್ದು, ಈ ವೇಳೆ ಹಲವರು ಶಾರುಖ್‌ ಖಾನ್‌ ಮೇಲೆ ಮುಗಿಬಿದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News