ದಲಿತ ಮಹಿಳೆ ಅಪಹರಣ ಪ್ರಕರಣ: ಪೊಲೀಸ್ ದಾಳಿ ನಡೆದ ಮನೆಯ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

Update: 2022-05-27 11:44 GMT
ಸಾಂದರ್ಭಿಕ ಚಿತ್ರ

ಲಕ್ನೋ: ದಲಿತ ಮಹಿಳೆಯೊಬ್ಬಳ ಅಪಹರಣ ಪ್ರಕರಣದಲ್ಲಿ ಪೊಲೀಸರು 22 ವರ್ಷದ ಯುವಕನೊಬ್ಬನನ್ನು ಹುಡುಕುತ್ತಾ  ಮೇ 24 ರಂದು ಬಾಘಪತ್ ಜಿಲ್ಲೆಯ ಬಚೋಡ್ ಎಂಬಲ್ಲಿನ ಮನೆಯೊಂದಕ್ಕೆ ದಾಳಿ ನಡೆಸಿದ್ದು, ಆ ಕುಟುಂಬದ ಆರು ಸದಸ್ಯರ ಪೈಕಿ ಮೂವರು ಆತ್ಮಹತ್ಯೆಗೈದಿದ್ದಾರೆ.

ಮೃತರಲ್ಲಿ ಮೇಹಕ್ ಸಿಂಗ್ ಎಂಬಾತನ ಪತ್ನಿ ಮತ್ತು ಇಬ್ಬರು ಪುತ್ರಿಯರು ಸೇರಿದ್ದಾರೆ. ಅವರು ವಿಷ ಸೇವಿಸಿದ್ದರೆಂದು ಶಂಕಿಸಲಾಗಿದೆ. ಪೊಲೀಸರು ತಮ್ಮ ಕುಟುಂಬ ಸದಸ್ಯರ ಜತೆ ಅನುಚಿತವಾಗಿ ವರ್ತಿಸಿ ಅವರನ್ನು ಅವಮಾನಿಸಿದ ಕಾರಣ ಅವರು ಆತ್ಮಹತ್ಯೆಗೈದಿದ್ದಾರೆಂದು ಮೇಹಕ್ ಸಿಂಗ್ ಆರೋಪಿಸಿದ್ದಾರೆ.

ದಲಿತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್ ಅವರ ಪುತ್ರನನ್ನು ಪೊಲೀಸರು ಹುಡುಕುತ್ತಿದ್ದಾರೆ. ಅವರ ಪುತ್ರ  ಮತ್ತು ಮಹಿಳೆ ಕಾಣೆಯಾಗಿದ್ದರೆ, ಆಕೆಯ ಕುಟುಂಬದ ಪ್ರಕಾರ ಆಕೆಯನ್ನು ಅಪಹರಿಸಲಾಗಿದೆ. ಸಿಂಗ್ ಕುಟುಂಬ ಇತರ ಹಿಂದುಳಿದ ವರ್ಗಕ್ಕೆ ಸೇರಿದೆ.

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್ ಅವರು ಚಪ್ರೌಲಿ ಠಾಣಾಧಿಕಾರಿ ನರೇಶ್ ಪಾಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಗಳವಾರ ಪೊಲೀಸ್ ದಾಳಿ ವೇಳೆ ಪೊಲೀಸ್ ತಂಡದ ಜತೆಗಿದ್ದ  ಕಾಂತಿಲಾಲ್ ಮತ್ತಾನ ಪುತ್ರರಾದ ಶಕ್ತಿ ಹಾಗೂ ರಾಜು ಅವರ ವಿರುದ್ಧವೂ ದೂರು ದಾಖಲಿಸಲಾಗಿದೆ.

ತಮ್ಮ ಮನೆ ಮೇಲೆ ದಾಳಿ ನಡೆದಾಗ ಮಹಿಳಾ ಪೊಲೀಸ್ ಸಿಬ್ಬಂದಿ ಕೂಡ ಇರಲಿಲ್ಲ ಎಂದು ಸಿಂಗ್ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News