ಗುಜರಾತ್‌ ನ ಮುಂದ್ರಾ ಬಂದರಿನಿಂದ 500 ಕೋಟಿ ರೂ. ಮೌಲ್ಯದ 52 ಕೆಜಿ ಕೊಕೇನ್ ವಶ

Update: 2022-05-27 12:48 GMT

 ಅಹ್ಮದಾಬಾದ್: ಗುಜರಾತ್‍ನ ಮುಂದ್ರಾ ಬಂದರಿನಲ್ಲಿ ಆಮದು ಸರಕಿನಿಂದ ಡಿಆರ್ ಐ ಅಧಿಕಾರಿಗಳು ಗುರುವಾರ 52 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಕೊಕೇನ್ ಬೆಲೆ  ರೂ 500 ಕೋಟಿ ಎಂದು ಅಂದಾಜಿಸಲಾಗಿದೆ.

ಇರಾನ್ ದೇಶದಿಂದ ಆಮದು ಮಾಡಲಾಗಿರುವ ಸರಕಿನಲ್ಲಿ ಡ್ರಗ್ಸ್ ಇರಬಹುದೆಂಬ ಗುಪ್ತಚರ ವರದಿಗಳ ಆಧಾರದಲ್ಲಿ `ಆಪರೇಷನ್ ನಮ್ಕೀನ್'' ಎಂಬ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದರ ಭಾಗವಾಗಿ ಇರಾನ್‍ನಿಂದ ಬಂದ ಸರಕನ್ನು ಅಧಿಕಾರಿಗಳು ಮೇ 24ರಿಂದ 26ರ ತನಕ ಸತತ ಮೂರು ದಿನ ತಪಾಸಣೆ ನಡೆಸಿದ್ದರು. ಈ ಸರಕಿನಲ್ಲಿ 1000 ಚೀಲ ಉಪ್ಪು ಇತ್ತು ಹಾಗೂ ಅದು 25 ಮೆಗಾಟನ್ ತೂಗುತ್ತಿತ್ತು ಎಂದು ಅಧಿಕೃತ ಮಾಹಿತಿಯಲ್ಲಿ ತಿಳಿಸಲಾಗಿತ್ತು.

ಆದರೆ  ತಪಾಸಣೆ ನಡೆಸಿ ಕೆಲವೊಂದು ಮಾದರಿಗಳನ್ನು ಗುಜರಾತ್ ವಿಧಿವಿಜ್ಞಾನ ನಿರ್ದೇಶನಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಕೊಕೇನ್ ಇರುವುದು ದೃಢಪಟ್ಟಿತ್ತು.

ಈ ಸರಕನ್ನು ಆಮದು ಮಾಡಿದವರ ಕುರಿತು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಕಳೆದ ವರ್ಷದ ಸೆಪ್ಟೆಂಬರಿನಲ್ಲಿ ಮುಂದ್ರಾ ಬಂದರಿನಿಂದ ಮೂರು ಟನ್ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಪ್ರಕರಣದಲ್ಲಿ 11 ಅಫ್ಗಾನೀಯರು, ನಾಲ್ಕು ಭಾರತೀಯರು ಹಾಗೂ ಒಬ್ಬ ಇರಾನಿ ನಾಗರಿಕನನ್ನು ಆರೋಪಿಗಳೆಂದು ಎನ್‍ಐಎ ಹೆಸರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News