ಉತ್ತರಾಖಂಡ: ಲೈಂಗಿಕ ಕಿರುಕುಳ ಆರೋಪ; ಆತ್ಮಹತ್ಯೆಗೆ ಶರಣಾದ ಮಾಜಿ ಸಚಿವ

Update: 2022-05-27 16:05 GMT

ಡೆಹ್ರಾಡೂನ್, ಮೇ 27: ಉತ್ತರಾಖಂಡದ ಮಾಜಿ ಸಚಿವ ರಾಜೇಂದ್ರ ಬಹುಗುಣ ಅವರು ಬುಧವಾರ ಹಾಲ್ಡ್ವಾನಿಯಲ್ಲಿರುವ ತನ್ನ ನಿವಾಸದ ಟ್ಯಾಂಕ್ ಹತ್ತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸೊಸೆ ಆರೋಪಿಸಿ ದೂರು ದಾಖಲಿಸಿದ ಮೂರು ದಿನಗಳ ಬಳಿಕ ರಾಜೇಂದ್ರ ಬಹುಗುಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಹುಗುಣ (59) ಅವರು ಹಾಲ್ಡ್ವಾನಿಯಲ್ಲಿರುವ ತನ್ನ ಮನೆಯಿಂದ ಪೊಲೀಸ್ನ ತುರ್ತು ದೂರವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳವ ಬಗ್ಗೆ ತಿಳಿಸಿದ್ದಾರೆ. ಪೊಲೀಸರು ಆಗಮಿಸಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

‘‘ಸೊಸೆಯ ಆರೋಪದಿಂದ ಅವರು ತೀವ್ರ ಖಿನ್ನರಾಗಿದ್ದರು’’ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಂಕಜ್ ಭಟ್ ತಿಳಿಸಿದ್ದಾರೆ. ಪೊಲೀಸರು ಆಗಮಿಸಿದಾಗ ಬಹುಗುಣ ಟ್ಯಾಂಕ್ನ ಮೇಲೆ ನಿಂತುಕೊಂಡಿದ್ದರು ಹಾಗೂ ಗುಂಡು ಹಾರಿಸಿಕೊಳ್ಳುವುದಾಗಿ ಬೆದರಿಕೆ ಒಡ್ಡುತ್ತಿದ್ದರು. ಪೊಲೀಸರು ಲೌಡ್ ಸ್ವೀಕರ್ ಬಳಸಿ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳದಂತೆ ಮನವರಿಕೆ ಮಾಡಲು ಪ್ರಯತ್ನಿಸಿದರು. ಆದರೆ, ಅವರು ಸುಳ್ಳು ಆರೋಪ ಹೊರಿಸಿದ ಬಗ್ಗೆ ಪುನರುಚ್ಚರಿಸಿದರು. 

ಒಮ್ಮೆ ಅವರು ಕೆಳಗೆ ಬರಲು ನಿರ್ಧರಿಸಿದರು. ಆದರೆ, ಅನಂತರ ಇದ್ದಕ್ಕಿದ್ದಂತೆ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದರು. ಸೊಸೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಬಹುಗುಣ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿತ್ತು. ಸೊಸೆ, ಅವರ ತಂದೆ ಹಾಗೂ ನೆರೆಯವರು ಲೈಂಗಿಕ ಕಿರುಕುಳದ ಆರೋಪ ಮಾಡಿದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬಹುಗುಣ ಅವರ ಪುತ್ರ ಅಜಯ್ ಬಹುಗುಣ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News