ರಾಜ್ಯಸಭೆಗೆ ಸ್ಪರ್ಧಿಸುವ ನಿರ್ಧಾರ ಕೈಬಿಟ್ಟ ಶಿವಾಜಿ ವಂಶಸ್ಥ ಸಂಭಾಜಿ ಛತ್ರಪತಿ

Update: 2022-05-27 16:06 GMT
Photo: Twitter/Kailashonline

ಮುಂಬೈ,ಮಾ.27: ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಕೆಲವೇ ದಿನಗಳ ಹಿಂದೆ ಪ್ರಕಟಿಸಿದ್ದ ಶಿವಾಜಿ ಮಹಾರಾಜರ ವಂಶಜ ಮತ್ತು ಪ್ರಮುಖ ಮರಾಠಾ ನಾಯಕ ಸಂಭಾಜಿ ಛತ್ರಪತಿ ತನ್ನ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಚುನಾವಣೆಯಲ್ಲಿ ಸ್ಪರ್ಧಿಸದಿರುವ ತನ್ನ ನಿರ್ಧಾರವು ‘ಕುದುರೆ ವ್ಯಾಪಾರ’ವನ್ನು ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು. ರಾಜ್ಯಸಭೆಯಲ್ಲಿ ತನ್ನ ಎರಡನೇ ಅಧಿಕಾರಾವಧಿಗೆ ಬೆಂಬಲವನ್ನು ಒದಗಿಸುವ ವಚನವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರು ಮುರಿದಿದ್ದಾರೆ ಎಂದು ಅವರು ಆರೋಪಿಸಿದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದ ಸಂಭಾಜಿ ಶಿವಸೇನೆಯ ನೆರವನ್ನು ಕೋರಿದ್ದರು. ಆದರೆ ತನ್ನ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಶಿವಸೇನೆ ಒತ್ತಾಯಿಸಿತ್ತು ಮತ್ತು ಸಂಭಾಜಿ ಅದನ್ನು ನಿರಾಕರಿಸಿದ್ದರು. ಸಂಜಯ ರಾವುತ್ ಮತ್ತು ಸಂಜಯ ಪವಾರ್ ಅವರು ಶಿವಸೇನಾ ಅಭ್ಯರ್ಥಿಗಳಾಗಿ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ ಮರುದಿನ ಸಂಭಾಜಿಯವರ ಹೇಳಿಕೆ ಹೊರಬಿದ್ದಿದೆ.

2016ರಲ್ಲಿ ರಾಷ್ಟ್ರಪತಿಗಳ ಕೋಟಾದಿಂದ ರಾಜ್ಯಸಭೆಗೆ ನಾಮಕರಣಗೊಂಡಿದ್ದ ಸಂಭಾಜಿ ಅಧಿಕಾರಾವಧಿ ಇತ್ತೀಚಿಗೆ ಮುಗಿದಿತ್ತು.
2009ರಲ್ಲಿ ಎನ್ಸಿಪಿಯನ್ನು ಸೇರಿದ್ದ ಸಂಭಾಜಿ ಕೊಲ್ಲಾಪುರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು,ಆದರೆ ಎನ್ಸಿಪಿ ಬಂಡಾಯ ಅಭ್ಯರ್ಥಿಯಿಂದ ಪರಾಭವಗೊಂಡಿದ್ದರು. ಮಹಾರಾಷ್ಟ್ರದಿಂದ ಆರು ರಾಜ್ಯಸಭಾ ಸ್ಥಾನಗಳಿಗೆ ಜೂ.10ರಂದು ಮತದಾನ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News