ಸಂಘ ಪರಿವಾರದ ಅಪಾಯಕಾರಿ ರಾಜಕಾರಣ

Update: 2022-05-28 03:21 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತೀಯರನ್ನು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ವಿಭಜಿಸಲು ಬಿಜೆಪಿ ಸೇರಿದಂತೆ ಸಂಘಪರಿವಾರದ ಕೋಮುವಾದಿ ಸಂಘಟನೆಗಳು ನಾನಾ ಮಸಲತ್ತುಗಳನ್ನು ನಡೆಸುತ್ತಾ ದೇಶದಲ್ಲಿ ಅಶಾಂತಿಯ ವಾತಾವರಣವನ್ನುಂಟು ಮಾಡುತ್ತಿವೆ. ಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರಲ್ಲಿ ಒಡಕಿನ ವಿಷಬೀಜ ಬಿತ್ತಲಾಗುತ್ತಿದೆ. ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಸಮಗೊಳಿಸಿ ಲೋಕಸಭೆಯಲ್ಲಿ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡ ಬಿಜೆಪಿ ಈಗ ಮಥುರಾ, ಕಾಶಿ ಮಾತ್ರವಲ್ಲ, ದೇಶದಲ್ಲಿ ಪ್ರತಿ ಊರಿನಲ್ಲಿ ಇಂತಹ ವಿವಾದಗಳನು ಸೃಷ್ಟಿಸುತ್ತಿದೆ. ಪ್ರತೀ ಮಸೀದಿ, ದರ್ಗಾದ ಅಡಿಯಲ್ಲಿ ಶಿವಲಿಂಗವಿದೆ, ಮಂದಿರವಿದೆ ಎಂದು ಸುಳ್ಳು ಕತೆಗಳನ್ನು ಕಟ್ಟಿ ಕಲಹಕ್ಕೆ ಪ್ರಚೋದನೆ ನೀಡುತ್ತಿದೆ.

ಅಯೋಧ್ಯೆಯ ಬಾಬರಿ ಮಸೀದಿಯನ್ನು ಒಡೆದು ನೆಲಸಮಗೊಳಿಸಿದ ನಂತರ ಅಂದಿನ ಕೇಂದ್ರ ಸರಕಾರ 1991ರಲ್ಲಿ ದೇಶದ ಯಾವುದೇ ಪೂಜಾ ಸ್ಥಳದ ಧಾರ್ಮಿಕ ಸ್ವರೂಪವು 1947 ಆಗಸ್ಟ್ 15ರಂದು ಹೇಗಿತ್ತೋ ಅದೇ ರೀತಿಯಲ್ಲಿ ಮುಂದುವರಿಯಬೇಕೆಂದು ಸಂಸತ್ತಿನ ಸಮ್ಮತಿಯೊಂದಿಗೆ ತೀರ್ಮಾನಿಸಿತು. ಈಗ ಸಂಘಪರಿವಾರದ ರಾಜಕೀಯ ಸ್ವಾರ್ಥಕ್ಕಾಗಿ ಸರ್ವ ಸಮ್ಮತ ಕಾಯ್ದೆಯನ್ನು ಉಲ್ಲಂಘಿಸಲು ಮುಂದಾಗಿದೆ. ಸದಾ ಜನರನ್ನು ಒಡೆಯುವ ಸಂಘಪರಿವಾರದ ಹುನ್ನಾರ ಸಂವಿಧಾನ ವಿರೋಧಿಯಾಗಿದೆ.

ವಾರಣಾಸಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹಿ ಮತ್ತು ಇತರ ಹಲವು ಪ್ರದೇಶಗಳಲ್ಲಿ ಪ್ರಾರ್ಥನಾ ಸ್ಥಳಕ್ಕೆ ಸಂಬಂಧಿಸಿದಂತೆ ಸಂಘಪರಿವಾರ ದೇಶವ್ಯಾಪಿಯಾಗಿ ಅಭಿಯಾನ ನಡೆಸುತ್ತಿದೆ. ಕೆಲ ನ್ಯಾಯಾಲಯಗಳಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸಲಾಗಿದೆ. ಇತಿಹಾಸವನ್ನು ಮನಬಂದಂತೆ ವಿರೂಪಗೊಳಿಸುವುದು, ಕಾನೂನು ವಿಧಿಗಳನ್ನು ತಪ್ಪುತಪ್ಪಾಗಿ ವ್ಯಾಖ್ಯಾನಿಸುವುದು, ಸರಕಾರದಲ್ಲಿ ಇರುವ ಮಂತ್ರಿಗಳು ಅಶಾಂತಿಗೆ ಪ್ರಚೋದನೆ ನೀಡುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಇಷ್ಟೆಲ್ಲಾ ನಡೆದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಾಣ ಮೌನ ತಾಳಿದ್ದಾರೆ.

ಕರ್ನಾಟಕದಲ್ಲಿ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಕೋವಿಡ್ ಸಾಂಕ್ರಾಮಿಕದ ಕಾರಣದಿಂದ ಎರಡು ವರ್ಷ ಮಕ್ಕಳು ಶಾಲೆಗೆ ಹೋಗಲಿಲ್ಲ. ಇನ್ನೇನು ಸಾಂಕ್ರಾಮಿಕ ಕಡಿಮೆಯಾಗಿ ಶಾಲೆ ಆರಂಭವಾಗುವಷ್ಟರಲ್ಲಿ ರಾಜ್ಯದ ಬಿಜೆಪಿ ಸರಕಾರಕ್ಕೆ ಪಠ್ಯಪುಸ್ತಕಗಳನ್ನು ಬದಲಿಸಿ ತನ್ನ ವಿಚಾರಧಾರೆಯನ್ನು ಪುಸ್ತಕಗಳಲ್ಲಿ ತೂರಿಸುವ ಯೋಚನೆ ಬಂತು. ಅದಕ್ಕಾಗಿ ಮುದ್ರಿತ ಪಠ್ಯಪುಸ್ತಕಗಳನ್ನು ಗೋದಾಮಿಗೆ ಹಾಕಿ ಸುಮಾರು ಎರಡೂವರೆ ಕೋಟಿ ರೂಪಾಯಿ ಖರ್ಚು ಮಾಡಿ ಹೊಸ ಪಠ್ಯ ಪುಸ್ತಕಗಳನ್ನು ತಯಾರಿಸಲು ಮುಂದಾಯಿತು. ಜಾತಿರಹಿತ ಸಮಾಜ ಕಟ್ಟಲು ದುಡಿದ ಬುದ್ಧ, ಬಸವಣ್ಣ, ಭಗತ್‌ಸಿಂಗ್, ಪೆರಿಯಾರ್, ನಾರಾಯಣ ಗುರುಗಳ ವಿಚಾರಗಳಿಗೆ ಕತ್ತರಿ ಪ್ರಯೋಗ ಮಾಡಲು ಮುಂದಾಯಿತು. ಅರ್ಹತೆ ಇಲ್ಲದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಿತು. ಅದು ವಿವಾದದ ಅಲೆ ಎಬ್ಬಿಸಿದಾಗ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಐಐಟಿ, ಪ್ರೊಫೆಸರ್ ಎಂದು ಶಿಕ್ಷಣ ಸಚಿವರು ಸುಳ್ಳು ಹೇಳಿದರು. ನಂತರ ತಾನು ಐಐಟಿ ಪ್ರೊಫೆಸರ್ ಅಲ್ಲ ಎಂದು ರೋಹಿತ್ ಚಕ್ರತೀರ್ಥ ಸ್ಪಷ್ಟೀಕರಣ ನೀಡಿದರು. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾದ,ಸುಳ್ಳು ಹೇಳಿದ ಶಿಕ್ಷಣ ಸಚಿವರು ಅಧಿಕಾರದಲ್ಲಿ ಮುಂದುವರಿಯಬೇಕೇ?

 ಹೀಗೆ ಒಂದಿಲ್ಲೊಂದು ನೆಪ ಮಾಡಿಕೊಂಡು ಒಂದು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಹಿಂಸೆಗೆ ಪ್ರಚೋದಿಸುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಅಯೋಧ್ಯೆಯ ಬಾಬರಿ ಮಸೀದಿಯನ್ನು ಕೆಡವಿದ್ದು ಕ್ರಿಮಿನಲ್ ಅಪರಾಧ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಅನೇಕ ಬಾರಿ ಹೇಳಿದೆ. ಇನ್ನು ಮುಂದೆ ಯಾವುದೇ ಪ್ರಾರ್ಥನಾ ಸ್ಥಳಕ್ಕೆ ಧಕ್ಕೆ ತರಬಾರದು ಎಂದು ಕಾನೂನನ್ನು ರೂಪಿಸಲಾಗಿದೆ. ಕೇಂದ್ರ, ರಾಜ್ಯಗಳಲ್ಲಿ ಅಧಿಕಾರ ಸೂತ್ರ ಹಿಡಿದು ಕಾನೂನು ಪಾಲನೆಯ ಹೊಣೆ ಹೊತ್ತ ಬಿಜೆಪಿ ನೇರವಾಗಿ ಕಾನೂನನ್ನು ಉಲ್ಲಂಘಿಸುತ್ತಿದೆ.
‘‘ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ನಮ್ಮ ಮೊದಲ ಶತ್ರುಗಳು’’ ಎಂದು ಆರೆಸ್ಸೆಸ್ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಹೇಳಿದ್ದರು. ಅಲ್ಪಸಂಖ್ಯಾತರು ಭಾರತದಲ್ಲಿ ಬದುಕಬೇಕೆಂದಿದ್ದರೆ ತಮ್ಮ ಸಂಸ್ಕೃತಿಯನ್ನು ಒಪ್ಪಿ ಅಡಿಯಾಳುಗಳಂತೆ ಬದುಕಬೇಕು ಎಂಬುದು ಅವರ ಪ್ರತಿಪಾದನೆಯಾಗಿತ್ತು

ಈಗ ಆರೆಸ್ಸೆಸ್ ಅದನ್ನು ಕಾರ್ಯಗತಗೊಳಿಸಲು ಹೊರಟಿದೆ. ತಮ್ಮ ಮೈಬೆವರಿನಿಂದ ಇತರ ಸಮುದಾಯಗಳ ಜೊತೆ ಸೇರಿ ಭಾರತವನ್ನು ಕಟ್ಟಿದ ಸಮುದಾಯವನ್ನು ನಿತ್ಯ ಅವಮಾನಕ್ಕೆ ಗುರಿಪಡಿಸುವುದು, ಮುಖ್ಯವಾಹಿನಿಯಿಂದ ಅಲ್ಪಸಂಖ್ಯಾತರನ್ನು ದೂರವಿಡುವುದು ಕೋಮುವಾದಿಗಳ ಕಾರ್ಯಸೂಚಿಯಾಗಿದೆ. ಇದರಿಂದಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ.
ಹಿಜಾಬ್, ಅಝಾನ್, ಜಾತ್ರೆ-ಉತ್ಸವಗಳಲ್ಲಿ ಮುಸಲ್ಮಾನರು ಅಂಗಡಿ ಇಟ್ಟು ವ್ಯವಹಾರ ಮಾಡು ವಂತಿಲ್ಲ. ಹೀಗೆ ನಾನಾ ತರದ ಅವಮಾನಕ್ಕೆ ಗುರಿಪಡಿಸಿ ಈಗ ಎಂದೂ ಮುಗಿಯದ ಚರಿತ್ರೆಯ ಸೇಡು ತೀರಿಸಿಕೊಳ್ಳುವ ಮಸೀದಿ, ದರ್ಗಾಗಳನ್ನು ಅಗೆದು ಮಂದಿರ, ಶಿವಲಿಂಗಗಳನ್ನು ಹುಡುಕುವ ಅಪಾಯಕಾರಿ ಅಜೆಂಡಾವನ್ನು ಮುಂದೆ ಮಾಡಿದ್ದಾರೆ. ಇಂತಹ ಸೂಕ್ಷ್ಮ ಪ್ರಶ್ನೆಯಲ್ಲಿ ನ್ಯಾಯಾಲಯ ಇಂತಹವರಿಗೆ ಉತ್ತೇಜನ ನೀಡುವ ರೀತಿಯಲ್ಲಿ ವರ್ತಿಸಬಾರದು. ದ್ವೇಷದಿಂದ ದೇಶ ಕಟ್ಟಲು ಸಾಧ್ಯವಾಗುವುದಿಲ್ಲ. ಪ್ರೀತಿಯಿಂದ ಹೊಸ ಭಾರತ ಕಟ್ಟಬೇಕಾಗಿದೆ. ಶಾಂತಿ, ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸಬೇಕಾಗಿದೆ.

ಬಿಜೆಪಿ ಕಳೆದ ಎಂಟು ವರ್ಷಗಳ ದುರಾಡಳಿತದಿಂದ ಭಾರತವನ್ನು ಅವನತಿಯ ಅಂಚಿಗೆ ತಂದು ನಿಲ್ಲಿಸಿದೆ. ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ವಿಭಜನಕಾರಿ ಅಜೆಂಡಾ ಅದಕ್ಕೆ ಅನಿವಾರ್ಯವಾಗಿದೆ. ಹಿಂದೂಗಳಲ್ಲಿ ಬಹುಸಂಖ್ಯಾತ ದುರಭಿಮಾನವನ್ನು ತುಂಬಿ ಅವರನ್ನು ಅಲ್ಪಸಂಖ್ಯಾತರು ಮತ್ತು ದಲಿತರ ಮೇಲೆ ಎತ್ತಿಕಟ್ಟಿ ತನ್ನ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳುವುದು ಅದರ ದುರುದ್ದೇಶವಾಗಿದೆ. ಭಾರತದ ಎಲ್ಲ ಸಮುದಾಯಗಳಿಗೆ ಸೇರಿದ ದೇಶಪ್ರೇಮಿ ಜನ ಒಂದಾಗಿ ಕೋಮುವಾದಿಗಳ ಈ ಷಡ್ಯಂತ್ರವನ್ನು ವಿಫಲಗೊಳಿಸಬೇಕಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News