ಸಂಸದೆಯಾಗಿದ್ದಾಗ ಪಡೆದಿದ್ದ ನಿವಾಸದಿಂದ ‘ಅನರ್ಹ’ ಮಾಯಾವತಿಯ ತೆರವು

Update: 2022-05-28 15:46 GMT

ಹೊಸದಿಲ್ಲಿ, ಮೇ 28: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿಯವರನ್ನು ಅವರು ವಾಸವಾಗಿದ್ದ ದಿಲ್ಲಿಯ ಲುಟೆನ್ಸ್ನಲ್ಲಿಯ ವಿಶಾಲ ಬಂಗಲೆಯಿಂದ ತೆರವುಗೊಳಿಸುವಲ್ಲಿ ಮೋದಿ ಸರಕಾರವು ಸಫಲಗೊಂಡಿದೆ. ಮಾಯಾವತಿ ಸಂಸದೆಯಲ್ಲದಿದ್ದರೂ ಸದ್ರಿ ಬಂಗಲೆಯಲ್ಲಿ ಉಳಿದುಕೊಂಡಿದ್ದರು.

2012 ಎಪ್ರಿಲ್ನಲ್ಲಿ ರಾಜ್ಯಸಭಾ ಸದಸ್ಯೆಯಾಗಿ ಆಯ್ಕೆಗೊಂಡಿದ್ದ ಮಾಯಾವತಿಯವರಿಗೆ ಆಗಿನ ಯುಪಿಎ ಸರಕಾರವು ನಂ.3 ತ್ಯಾಗರಾಜ ಮಾರ್ಗ ಬಂಗಲೆಯನ್ನು ಹಂಚಿಕೆ ಮಾಡಿತ್ತು. ಮಾಯಾವತಿ ತನ್ನ ಅಧಿಕಾರಾವಧಿ ಪೂರ್ಣಗೊಳ್ಳುವ ಒಂಭತ್ತು ತಿಂಗಳು ಮೊದಲೇ 2017 ಜುಲೈನಲ್ಲಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಆದರೆ ಅವರು ತಾನು ವಾಸವಿದ್ದ ಟೈಪ್ 8 ಬಂಗಲೆಯನ್ನು ಖಾಲಿ ಮಾಡಿರಲಿಲ್ಲ.

ಟೈಪ್ 8 ಅತ್ಯಂತ ದೊಡ್ಡ ಮತ್ತು ಅತ್ಯುನ್ನತ ಮಟ್ಟದ ಸರಕಾರಿ ಬಂಗಲೆಗಳಾಗಿದ್ದು,ಸಾಮಾನ್ಯವಾಗಿ ಹಾಲಿ ಸಚಿವರಿಗೆ ಮತ್ತು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಅವುಗಳನ್ನು ಹಂಚಿಕೆ ಮಾಡಲಾಗುತ್ತದೆ. ಕಳೆದ ಕೆಲವು ತಿಂಗಳುಗಳಿಂದ ಸಚಿವ ಸ್ಥಾನಗಳನ್ನು ಕಳೆದುಕೊಂಡಿರುವ ಬಿಜೆಪಿ ಸಂಸದರು ಸೇರಿದಂತೆ ‘ಅನರ್ಹ’ನಾಯಕರನ್ನು ಅಧಿಕೃತ ಬಂಗಲೆಗಳಿಂದ ತೆರವುಗೊಳಿಸುವ ಕಾರ್ಯವನ್ನು ಸರಕಾರವು ಚುರುಕುಗೊಳಿಸಿದೆ.

ಮಾಯಾವತಿಯವರ ಬಂಗಲೆಯನ್ನು ಕಳೆದ ವಾರ ತೆರವುಗೊಳಿಸಲಾಗಿದ್ದು,ರಾಷ್ಟ್ರೀಯ ಪಕ್ಷದ ಅಧ್ಯಕ್ಷೆಯಾಗಿರುವುದರಿಂದ ಲೋಧಿ ಎಸ್ಟೇಟ್ನಲ್ಲಿಯ ಹಿರಿಯ ಬಿಎಸ್ಪಿ ನಾಯಕ ಸತೀಶ ಮಿಶ್ರಾ ವಾಸವಿರುವ ಸಣ್ಣ ಗಾತ್ರದ ಬಂಗಲೆಯನ್ನು ಹಂಚಿಕೆ ಮಾಡಲಾಗಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಲ್ಲಿನ ಮೂಲಗಳು ತಿಳಿಸಿದವು. ಮಿಶ್ರಾರ ರಾಜ್ಯಸಭಾ ಸದಸ್ಯತ್ವವು ಈ ವರ್ಷದ ಎಪ್ರಿಲ್ನಲ್ಲಿ ಅಂತ್ಯಗೊಂಡಿದೆ.

2013ರಲ್ಲಿ ಆಗಿನ ಯುಪಿಎ ಸರಕಾರವು ದಿಲ್ಲಿಯ ಗುರುದ್ವಾರಾ ರಕಬ್ಗಂಜ್ ರಸ್ತೆಯಲ್ಲಿನ ಪರಸ್ಪರ ಹೊಂದಿಕೊಂಡಿದ್ದ ಮೂರು ಸರಕಾರಿ ಬಂಗಲೆಗಳನ್ನು ಮಾಯಾವತಿಯವರ ಬಹುಜನ ಪ್ರೇರಣಾ ಟ್ರಸ್ಟ್ಗೆ ಹಂಚಿಕೆ ಮಾಡಿತ್ತು. ಬಳಿಕ ಈ ಬಂಗಲೆಗಳನ್ನು ಸೇರಿಸಿ ಬಿಎಸ್ಪಿ ಸ್ಥಾಪಕ ಕಾನ್ಶಿರಾಮ ಅವರ ಸ್ಮಾರಕವನ್ನಾಗಿ ಪರಿವರ್ತಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News