ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಆಗ್ರಹಿಸಿ ಮುಂದುವರಿದ ಧರಣಿ

Update: 2022-05-28 17:21 GMT

ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣ ಪತ್ರಕ್ಕಾಗಿ ಆಗ್ರಹಿಸಿ ಮೊಗೇರರು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ತೀವ್ರಗೊಳಿಸುವ ಸೂಚನೆಯನ್ನು ನೀಡಿದ್ದು ಜಿಲ್ಲಾ ಅಧ್ಯಕ್ಷ ಕೆ.ಎಂ. ಕರ್ಕಿಯವರು ಸರಕಾರದ ಮೇಲೆ ಕಿಡಿ ಕಾರಿದ್ದಾರೆ. ಯಾರದ್ದೋ ಮಾತು ಕೇಳಿ ಆಡಳಿತ ನಡೆಸುವುದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎನ್ನುವ ತೀವ್ರ ವಾಗ್ದಾಳಿ ನಡೆಸಿ, ಜನಪ್ರತಿನಿದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  

ಮುಂದಿನ ದಿನಗಳಲ್ಲಿ ತಮ್ಮ ಧರಣಿ ಸತ್ಯಾಗ್ರಹ ತೀವ್ರಗೊಂಡರೆ ಅದಕ್ಕೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದ ಅವರು ನಾವು ಕಳೆದ 67 ದಿನಗಳಿಂದ ಧರಣಿ ನಡೆಸುತ್ತಿದ್ದೇವೆ. ಸರಕಾರ ಯಾವುದೇ ರೀತಿಯ ಸ್ಪಂಧನೆ ನೀಡದೇ ಇರುವುದರಿಂದ ಮುಂದಿನ ಹೋರಾಟದ ಕುರಿತು ನಿರ್ಧರಿಸಲಾಗುವುದು ಎಂದರು. 

ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು 1977-78ರಲ್ಲಿ ದೇವರಾಜು ಅರಸು ಮುಖ್ಯಮಂತ್ರಿ ಹಾಗೂ ಎಸ್.ಎಂ. ಯಾಹ್ಯಾ ಸಚಿವರಿದ್ದಾಗ ಆದೇಶ ಮಾಡಿದ್ದು ನಾವು ಕಾನೂನ ಬದ್ಧವಾಗಿಯೇ ಪಡೆದುಕೊಂಡಿದ್ದೇವೆ. ನಾವು ಸಮುದ್ರದ ಅಲೆಯಲ್ಲಿ ಹೋರಾಟ ಮಾಡಿ ಜೀವನ ನಡೆಸುತ್ತಿರುವುದು ಮತ್ತು ಬಹಳ ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆಂದು ನಮ್ಮ ಸಮಾಜವನ್ನು ಗುರುತಿಸಿ ಅಂದು ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗಿತ್ತು. ಈ ಕುರಿತು ನಮ್ಮಲ್ಲಿ ದಾಖಲೆ ಇದೆ. ನಾವು ಯಾರ ಆಸ್ತಿ ಹಕ್ಕನ್ನೂ ಕಸಿಯುತ್ತಿಲ್ಲ. ನಮಗೆ ಹಿಂದೆ ಸರಕಾರವೇ ಸಂವಿಧಾನಬದ್ಧವಾಗಿ ನೀಡಿದ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮುಂದುವರಿಸಿ ನ್ಯಾಯ ಕೊಡಿ ಎಂದು ನಾವು ಸರಕಾರವನ್ನು ಕೇಳುತ್ತಿದ್ದೇವೆ. ಸರಕಾರ ಇಷ್ಟರೊಳಗೆ ನಮಗೆ ಸ್ಪಂದಿಸಿ ನ್ಯಾಯ ಕೊಡಬೇಕಿತ್ತು. ಆದರೆ ಆ ಕೆಲಸವನ್ನು ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಮಾಡುತ್ತಿಲ್ಲ. ನಮ್ಮ ಹೋರಾಟದ ಕುರಿತು ನಿರ್ಲಕ್ಷ್ಯ ಸರಿಯಲ್ಲ, ನಮ್ಮ ವಿರುದ್ದ ಎಲ್ಲೇ ಪ್ರತಿಭಟನೆ ನಡೆಸಿದರೂ ನಮಗೆ ಅದು ಸಂಬಂಧವಿಲ್ಲದ ವಿಚಾರ. ನಮಗೆ ಸರಕಾರ ಪರಿಶಿಷ್ಟ ಜಾತಿ ಪ್ರಮಾಣ ನೀಡುವ ಬಗ್ಗೆ ಬದ್ಧತೆ ಪ್ರದರ್ಶಿಸಬೇಕು. ಸರಕಾರ ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಈ ಹಿಂದೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರದ ಸಲುವಾಗಿ ನಮ್ಮ ಸಮಾಜದ ಧರಣಿ ಸತ್ಯಾಗ್ರಹ 67 ದಿನ ನಡೆದಿತ್ತು. ಅಂದಿನ ಸರಕಾರ ನಮಗೆ ಸ್ಪಂದಿಸಿ ನ್ಯಾಯ ದೊರಕಿಸಿಕೊಟ್ಟಿತ್ತು. ಆದರೆ ಇಂದಿನ ನಮ್ಮ ಧರಣಿ 67 ದಿನಗಳು ಕಳೆದಿದ್ದು, ಸರಕಾರ ಶೀಘ್ರ ನಮಗೆ ನ್ಯಾಯ ದೊರಕಿಸಿಕೊಡಬೇಕು. ಈಗಾಗಲೇ ನಾವು ಜಿಲ್ಲಾಧಿಕಾರಿ ಮತ್ತು ಸರಕಾರಕ್ಕೆ ನಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸ್ಪಷ್ಟಪಡಿಸಿ ಮನವಿ ಸಲ್ಲಿಸಿದ್ದೇವೆ.  ಇಲ್ಲದಿದ್ದಲ್ಲಿ ಮುಂದೆ ನಾವು ಉಗ್ರ ಹೋರಾಟಕ್ಕೆ ನಿರ್ಧರಿಸಿದ್ದು, ಅದರಿಂದಾಗುವ ಯಾವುದೇ ರೀತಿಯ ಪರಿಣಾಮಕ್ಕೆ ನಾವು ಜವಾಬ್ದಾರರಲ್ಲ ಎಂದು ಎಚ್ಚರಿಕೆ ನೀಡಿದ ಅವರು ಸರಕಾರ ನಮ್ಮನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು. 

ತಾಲೂಕು ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ ಮಾತನಾಡಿ ನಮ್ಮ ಧರಣಿ ಸತ್ಯಾಗ್ರಹ 67 ದಿನಗಳು ಪೂರೈಸಿದ್ದರೂ ಸರಕಾರದಿಂದ ನಮಗೆ ನ್ಯಾಯ ಸಿಕ್ಕಿಲ್ಲ. ಸರಕಾರದಿಂದ ನಮಗೆ ನ್ಯಾಯ ಸಿಗದಿದ್ದಲ್ಲಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯವಾಗಲಿದೆ ಎಂದರಲ್ಲದೇ ಸರಕಾರ ನಮಗೆ ಶೀಘ್ರ ನ್ಯಾಯ ಕೊಡಬೇಕೆಂದು ಆಗ್ರಹಿಸಿದರು. 67ನೇ ದಿನದ ಪ್ರತಿಭಟನೆಯಲ್ಲಿ ಕಾಯ್ಕಿಣಿ ಭಾಗದ ಮಹಿಳೆಯರು, ಮಕ್ಕಳು, ಪುರುಷರು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಎಫ್.ಕೆ. ಮೊಗೇರ, ಪ್ರಮುಖರಾದ ಜಟಕಾ ಮೊಗೇರ, ವೆಂಕಟ್ರಮಣ ಮೊಗೇರ, ಗುರುದಾಸ ಮೊಗೇರ ಸೇರಿದಂತೆ ಹಲವು ಮುಖಂಡರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News