ರಶ್ಯದಿಂದ ಮತ್ತೊಂದು ಹೈಪರ್ಸಾನಿಕ್ ಕ್ಷಿಪಣಿ ಪ್ರಯೋಗ

Update: 2022-05-28 18:04 GMT

ಮಾಸ್ಕೊ, ಮೇ 28: ಅತ್ಯಾಧುನಿಕ ಹೈಪರ್ಸಾನಿಕ್ ಕ್ಷಿಪಣಿ ‘ಝಿರ್ಕಾನ್’ನ ಪ್ರಯೋಗಾರ್ಥ ಪರೀಕ್ಷೆ ಶನಿವಾರ ಯಶಸ್ವಿಯಾಗಿದ್ದು ಇದು 1000 ಕಿ.ಮೀ ದೂರದ ಗುರಿಗೆ ನಿಖರವಾಗಿ ಅಪ್ಪಳಿಸಿದೆ ಎಂದು ರಶ್ಯ ಘೋಷಿಸಿದೆ. 

ಉಕ್ರೇನ್ ವಿರುದ್ಧದ ಯುದ್ಧವನ್ನು ತೀವ್ರಗೊಳಿಸಿರುವ ಮಧ್ಯೆಯೇ, ಬ್ಯಾರೆಂಟ್ಸ್ ಸಮುದ್ರದಲ್ಲಿ ನಿರ್ಮಿಸಿರುವ ಅಡ್ಮಿರಲ್ ಗೊರ್ಷ್ಕೋವ್ ನೆಲೆಯಿಂದ ಈ ಕ್ಷಿಪಣಿಯನ್ನು ಉಡಾಯಿಸಿದ್ದು 1000 ಕಿ.ಮೀ ದೂರದಲ್ಲಿ ಆರ್ಕ್ಟಿಕ್ ಪ್ರದೇಶದ ಬಿಳಿ ಸಮುದ್ರದ ದಡದಲ್ಲಿ ಗುರುತಿಸಲಾದ ಗುರಿಗೆ ನಿಖರವಾಗಿ ಅಪ್ಪಳಿಸಿದೆ. ನೂತನ ಅಸ್ತ್ರಗಳ ಪರೀಕ್ಷೆಯ ಭಾಗವಾಗಿ ಈ ಪ್ರಯೋಗಾರ್ಥ ಪರೀಕ್ಷೆ ನಡೆಸಲಾಗಿದೆ ಎಂದು ರಶ್ಯದ ರಕ್ಷಣಾ ಇಲಾಖೆ ಹೇಳಿದೆ.

ಶಬ್ದದ ವೇಗಕ್ಕಿಂತ ಸುಮಾರು 10 ಪಟ್ಟು ವೇಗದಲ್ಲಿ ಚಲಿಸುವ ಈ ಕ್ಷಿಪಣಿ 1000 ಕಿ.ಮೀ ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಈ ಹೊಸ ಕ್ಷಿಪಣಿಯು ರಶ್ಯದ ಬತ್ತಳಿಕೆಯಲ್ಲಿರುವ ‘ಅಜೇಯ’ ಶಸ್ತ್ರಾಸ್ತ್ರಗಳ ಗುಂಪಿಗೆ ಹೊಸ ಸೇರ್ಪಡೆಯಾಗಿದೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News