ಆರ್ಥಿಕ ಹಿಂಜರಿತ ಒಳ್ಳೆಯ ವಿಷಯ‌, ಆಲಸ್ಯದಿಂದ ಜನರನ್ನು ಬಡಿದೆಬ್ಬಿಸಲು ಅವಶ್ಯಕ: ಎಲಾನ್ ಮಸ್ಕ್

Update: 2022-05-28 18:18 GMT

ನ್ಯೂಯಾರ್ಕ್, ಮೇ 28: ಆರ್ಥಿಕ ಹಿಂಜರಿತದ ಬಗ್ಗೆ ಈ ಹಿಂದೆ ಭವಿಷ್ಯ ನುಡಿದಿದ್ದ ಕೋಟ್ಯಾಧಿಪತಿ ಉದ್ಯಮಿ ಎಲಾನ್ ಮಸ್ಕ್, ಆರ್ಥಿಕ ಹಿಂಜರಿತ ನಿಜವಾಗಿಯೂ ಒಳ್ಳೆಯ ವಿಷಯ. ಕೋವಿಡ್ ಸಾಂಕ್ರಾಮಿಕದ ಬಳಿಕದ ಆಲಸ್ಯದ ವರ್ತನೆಯಿಂದ ನಮ್ಮನ್ನು ಬಡಿದೆಬ್ಬಿಸಲು ಇದು ಅಗತ್ಯವಾಗಿದೆ ಎಂದಿದ್ದಾರೆ. ಕೆಲವು ದಿವಾಳಿತನ ಸಂಭವಿಸಬೇಕಾಗಿದೆ ಎಂದು ತಾನು ನೀಡಿದ ಹೇಳಿಕೆಗೆ ಟ್ವಿಟರ್ ಬಳಕೆದಾರರು ವಿವರಣೆ ಕೇಳಿದಾಗ ಮಸ್ಕ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ‌

ನಾವು ಈಗಲೂ ಆರ್ಥಿಕ ಹಿಂಜರಿತದತ್ತ ಸಾಗುತ್ತಿದ್ದೇವೆ ಎಂದು ನಿಮಗನಿಸುತ್ತದೆಯೇ ಎಂದು ಟ್ವಿಟರ್ ಬಳಕೆದಾರರೊಬ್ಬರು ಶುಕ್ರವಾರ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಸ್ಕ್, ಹೌದು, ಆದರೆ ವಾಸ್ತವವಾಗಿ ಇದು ಒಳ್ಳೆಯ ವಿಷಯ. ಕೆಲವು ಮೂರ್ಖರಿಗೆ ದೀರ್ಘಾವಧಿಯಿಂದ ಹಣದ ಸುರಿಮಳೆಯಾಗುತ್ತಿದೆ. ಕೆಲವು ದಿವಾಳಿತನ ಸಂಭವಿಸಬೇಕಾಗಿದೆ. ಅಲ್ಲದೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಜನರಲ್ಲಿ ಕಷ್ಟಪಟ್ಟು ದುಡಿಯುವ ಅಗತ್ಯವಿಲ್ಲ ಎಂಬ ಭಾವನೆ ಹುಟ್ಟಿಕೊಂಡಿದೆ. ಅವರನ್ನು ಬಡಿದೆಬ್ಬಿಸಬೇಕಾಗಿದೆ ಎಂದರು. 

ಆರ್ಥಿಕ ಹಿಂಜರಿತ ಎಷ್ಟು ಸಮಯ ಇರಬಹುದು ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು ‘ ಈ ಹಿಂದಿನ ಅನುಭವದ ಆಧಾರದಲ್ಲಿ ಹೇಳುವುದಾದರೆ, ಸುಮಾರು 12ರಿಂದ 18 ತಿಂಗಳು. ಅಂತರ್ಗತವಾಗಿ ಋಣಾತ್ಮಕ ನಗದು ಹರಿವು ಹೊಂದಿರುವ ಸಂಸ್ಥೆಗಳು ಸಾಯಬೇಕಾಗಿದೆ. ಈ ಮೂಲಕ ಸಂಪನ್ಮೂಲವನ್ನು ಅವು ಬರಿದಾಗಿಸುವುದು ನಿಲ್ಲಲಿದೆ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News