×
Ad

ಪ್ರವಾದಿ ಕುರಿತ ಹೇಳಿಕೆಗಾಗಿ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ಪ್ರಕರಣ ದಾಖಲು

Update: 2022-05-29 20:01 IST

ಮುಂಬೈ,ಮೇ 29: ಪ್ರವಾದಿ ಮುಹಮ್ಮದ್ರ ಕುರಿತು ಹೇಳಿಕೆಗಾಗಿ ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ನೂಪುರ್ ಶರ್ಮಾ ವಿರುದ್ಧ ಮುಂಬೈ ಪೊಲೀಸರು ಶನಿವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಗುರುವಾರ ಟೈಮ್ಸ್ ನೌ ಸುದ್ದಿ ವಾಹಿನಿಯು ಜ್ಞಾನವಾಪಿ ಮಸೀದಿ-ಕಾಶಿ ವಿಶ್ವನಾಥ ದೇವಸ್ಥಾನ ವಿವಾದ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶರ್ಮಾ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವಿವಾದ ಸೃಷ್ಟಿಯಾದ ಬಳಿಕ ಮರುದಿನ ಶರ್ಮಾರ ಹೇಳಿಕೆಗಳಿಂದ ಅಂತರವನ್ನು ಕಾಯ್ದುಕೊಂಡಿದ್ದ ಸುದ್ದಿ ವಾಹಿನಿಯು,‘ಸಂಯಮವನ್ನು ಕಾಯ್ದುಕೊಳ್ಳುವಂತೆ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಇತರರ ವಿರುದ್ಧ ಅಸಂಸದೀಯ ಭಾಷೆಯನ್ನು ಬಳಸದಂತೆ ನಾವು ನಮ್ಮ ಚರ್ಚೆಗಳಲ್ಲಿ ಪಾಲ್ಗೊಳ್ಳುವವರನ್ನು ಆಗ್ರಹಿಸುತ್ತೇವೆ ’ ಎಂದು ಶುಕ್ರವಾರ ಟ್ವೀಟಿಸಿತ್ತು.ಮುಸ್ಲಿಮ್ ಸಂಘಟನೆ ರಝಾ ಅಕಾಡೆಮಿಯ ದೂರಿನ ಮೇರೆಗೆ ಐಪಿಸಿಯ ವಿವಿಧ ಕಲಮ್ಗಳಡಿ ಶರ್ಮಾ ವಿರುದ್ಧ ಪ್ರಕರಣ ದಾಖಲಾಗಿದೆ.

ಆಲ್ಟ್ ನ್ಯೂಸ್‌ನ  ಸಹಸ್ಥಾಪಕ ಮುಹಮ್ಮದ್ ಝುಬೇರ್ ಅವರು ಶುಕ್ರವಾರ ಬಿಜೆಪಿ ನಾಯಕಿಯ ಹೇಳಿಕೆಗಳ ವೀಡಿಯೊವನ್ನು ಹಂಚಿಕೊಂಡ ಬಳಿಕ,ತನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ತಾನಿದನ್ನು ದಿಲ್ಲಿ ಪೊಲೀಸರ ಗಮನಕ್ಕೆ ತಂದಿದ್ದೇನೆ ಎಂದು ಶರ್ಮಾ ಟ್ವೀಟಿಸಿದ್ದರು.

ತನಗೆ ಬಂದಿರುವ ಬೆದರಿಕೆಗಳಿಗೆ ಝುಬೇರ್ ಹೊಣೆಯಾಗಿದ್ದಾರೆ ಎಂದು ಶರ್ಮಾ ಆರೋಪಿಸಿದ್ದಾರೆ. ಝುಬೇರ್ ಟ್ವೀಟಿಸಿರುವ ತುಣುಕು ಟೈಮ್ಸ್ ನೌ ಚರ್ಚೆಯಿಂದ ‘ಹೆಚ್ಚು ಎಡಿಟ್ ಮಾಡಲಾದ ಮತ್ತು ಆಯ್ದ ವೀಡಿಯೊ ’ಆಗಿದೆ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಆದರೆ,ತಾನು ಶರ್ಮಾರ ಹೇಳಿಕೆಗಳನ್ನು ಶೇರ್ ಮಾಡುವ ಮೂಲಕ ಪತ್ರಕರ್ತನಾಗಿ ತನ್ನ ಕಾರ್ಯವನ್ನು ಮಾಡುತ್ತಿದ್ದೇನೆ ಎಂದು ಝುಬೇರ್ ಪ್ರತಿಕ್ರಿಯಿಸಿದ್ದಾರೆ.

ಈ ಬೆದರಿಕೆಗಳ ವಿರುದ್ಧ ಪೊಲೀಸರು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಟ್ವೀಟ್‌ನಲ್ಲಿ ತಿಳಿಸಿರುವ ಝುಬೇರ್,‘ಆದರೆ ಟಿವಿ ನೇರ ಪ್ರಸಾರದಲ್ಲಿ ನೀವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಅತ್ಯಂತ ದ್ವೇಷಪೂರಿತ ವಿಷಯಗಳನ್ನು ಹೇಳುವುದನ್ನು ಪೂರ್ವಾನ್ವಯವಾಗಿ ಸಮರ್ಥಿಸುವುದಿಲ್ಲ. ಯಾರಾದರೂ ನಿಜವಾಗಿಯೂ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುತ್ತಿದ್ದರೆ ಅದಕ್ಕೆ ಕುಮ್ಮಕ್ಕು ನೀಡುತ್ತಿರುವುದು ನೀವು ಮತ್ತು ನಿಮ್ಮ ಚಾನೆಲ್ ಹೊರತು ಅದನ್ನು ವರದಿ ಮಾಡುತ್ತಿರುವವರು ಅಲ್ಲ ’ ಎಂದು ಹೇಳಿದ್ದಾರೆ.ಶರ್ಮಾರ ಹೇಳಿಕೆಗಾಗಿ ಅವರ ವಿರುದ್ಧ ಕಠಿಣ ಕ್ರಮಕ್ಕಾಗಿ ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಶನಿವಾರ ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News