×
Ad

ಜುಲೈ-ಆಗಸ್ಟ್‌ನಲ್ಲಿ ದೇಶದಲ್ಲಿ ಇನ್ನೊಂದು ವಿದ್ಯುತ್ ಬಿಕ್ಕಟ್ಟು ಎದುರಾಗಲಿದೆ: ವರದಿ

Update: 2022-05-29 20:31 IST
PHOTO:ANI

ಹೊಸದಿಲ್ಲಿ,ಮೇ 29: ಮಳೆಗಾಲಕ್ಕೆ ಮುನ್ನ ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಕಡಿಮೆಯಿರುವುದು ಜುಲೈ-ಆಗಸ್ಟ್‌ನಲ್ಲಿ  ಇನ್ನೊಂದು ವಿದ್ಯುತ್ ಬಿಕ್ಕಟ್ಟು ಉಂಟಾಗುವ ಸಾಧ್ಯತೆಯನ್ನು ಸೂಚಿಸುತ್ತಿದೆ ಎಂದು ಸ್ವತಂತ್ರ ಸಂಶೋಧನಾ ಸಂಸ್ಥೆಯಾಗಿರುವ ಸೆಂಟರ್ ಫಾರ್ ರೀಸರ್ಚ್ ಆನ್ ಎನರ್ಜಿ ಆ್ಯಂಡ್ ಕ್ಲೀನ್ ಏರ್ (ಸಿಇಆರ್ಎ) ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.


ಪ್ರಸ್ತುತ ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿಯ ವಿದ್ಯುತ್ ಸ್ಥಾವರಗಳಲ್ಲಿ 13.5 ಮಿ.ಟನ್ ಮತ್ತು ಒಟ್ಟಾರೆಯಾಗಿ ದೇಶದ ಎಲ್ಲ ವಿದ್ಯುತ್ ಸ್ಥಾವರಗಳಲ್ಲಿ 20.7 ಮಿ.ಟನ್ ಕಲ್ಲಿದ್ದಲು ದಾಸ್ತಾನಿದೆ.ವಿದ್ಯುತ್ ಬೇಡಿಕೆಯಲ್ಲಿ ಅಲ್ಪ ಏರಿಕೆಯನ್ನೂ ಪೂರೈಸುವ ಸ್ಥಿತಿಯಲ್ಲಿ ಕಲ್ಲಿದ್ದಲು ವಿದ್ಯುತ್ ಸ್ಥಾವರಗಳು ಇಲ್ಲ ಎನ್ನುವುದನ್ನು ಅಧಿಕೃತ ಮೂಲಗಳಿಂದ ಸಂಕಲಿಸಲಾಗಿರುವ ಅಂಕಿಅಂಶಗಳು ಸೂಚಿಸುತ್ತಿವೆ ಮತ್ತು ಕಲ್ಲಿದ್ದಲು ಸಾಗಣಿಕೆಗಾಗಿ ಮುಂಚೆಯೇ ಯೋಜನೆಯನ್ನು ರೂಪಿಸುವ ಅಗತ್ಯವಿದೆ ಎಂದು ಸಿಆರ್ಇಎ ತನ್ನ ವರದಿಯಲ್ಲಿ ಹೇಳಿದೆ.ಭಾರತೀಯ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (ಸಿಇಎ)ವು ಆಗಸ್ಟ್‌ನಲ್ಲಿ  214 ಜಿಡಬ್ಲುದಷ್ಟು ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಮುನ್ನಂದಾಜಿಸಿದೆ. ಇದರ ಜೊತೆಗೆ ಸರಾಸರಿ ವಿದ್ಯುತ್ ಬೇಡಿಕೆಯೂ ಮೇ ತಿಂಗಳಿನಲ್ಲಿದ್ದ 1,33,426 ಮಿ.ಯೂನಿಟ್ ಗಿಂತ ಹೆಚ್ಚಾಗಬಹುದು.ನೈರುತ್ಯ ಮಾನ್ಸೂನ್ ಆಗಮನವು ಗಣಿಗಾರಿಕೆ ಚಟುವಟಿಕೆಗಳಿಗೆ ಮತ್ತು ಗಣಿಗಳಿಂದ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಸಾಗಾಣಿಕೆಗೆ ಇನ್ನಷ್ಟು ಅಡ್ಡಿಗಳನ್ನುಂಟು ಮಾಡಲಿದೆ. ಮಳೆಗಾಲಕ್ಕೆ ಮುನ್ನ ಸಾಕಷ್ಟು ಮಟ್ಟದಲ್ಲಿ ಕಲ್ಲಿದ್ದಲು ಸಂಗ್ರಹವಿಲ್ಲದಿದ್ದರೆ ದೇಶವು 2022ರ ಜುಲೈ-ಆಗಸ್ಟ್‌ನಲ್ಲಿ  ಇನ್ನೊಂದು ವಿದ್ಯುತ್ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎಂದು ಸಿಆರ್ಇಎ ತಿಳಿಸಿದೆ.

ದೇಶದಲ್ಲಿ ಇತ್ತೀಚಿಗೆ ಉಂಟಾಗಿದ್ದ ವಿದ್ಯುತ್ ಬಿಕ್ಕಟ್ಟಿಗೆ ವಿತರಣೆಯಲ್ಲಿ ವ್ಯತ್ಯಯ ಮತ್ತು ಅಧಿಕಾರಿಗಳ ನಿರ್ಲಕ್ಷ ಕಾರಣವಾಗಿತ್ತೇ ಹೊರತು ಕಲ್ಲಿದ್ದಲು ಉತ್ಪಾದನೆಯಲ್ಲ ಎಂದು ಹೇಳಿರುವ ವರದಿಯು,ಕಲ್ಲಿದ್ದಲು ಸಾಗಾಣಿಕೆ ಮತ್ತು ನಿರ್ವಹಣೆ ವಿದ್ಯುತ್ ಕ್ಷೇತ್ರದ ಹೆಚ್ಚಿನ ಬೇಡಿಕೆಗೆ ಅನುಗುಣವಾಗಿರಲಿಲ್ಲ ಎನ್ನುವುದು ದತ್ತಾಂಶಗಳಿಂದ ಸ್ಪಷ್ಟವಾಗಿದೆ. ಸಾಕಷ್ಟು ಕಲ್ಲಿದ್ದಲು ಉತ್ಪಾದನೆಯಾಗುತ್ತಿದ್ದರೂ ಉಷ್ಣ ವಿದ್ಯುತ್ ಸ್ಥಾವರಗಳು ಸಾಕಷ್ಟು ದಾಸ್ತಾನುಗಳನ್ನು ಹೊಂದಿರಲಿಲ್ಲ ಎಂದು ತಿಳಿಸಿದೆ.ಪ್ರಸಕ್ತ ಪ್ರವೃತ್ತಿಯು ಇತ್ತೀಚಿಗೆ ಆರಂಭವಾಗಿದ್ದಲ್ಲ. ಮೇ 2020ರಿಂದ ಮಧ್ಯದಲ್ಲಿ ಕೆಲವು ತಿಂಗಳುಗಳನ್ನು ಹೊರತುಪಡಿಸಿ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಸಂಗ್ರಹ ಕಡಿಮೆಯಾಗುತ್ತಲೇ ಬಂದಿದೆ. ಮಳೆಗಾಲದ ಆರಂಭಕ್ಕೆ ಮುನ್ನ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಹೊಂದಿರುವಲ್ಲಿ ವಿದ್ಯುತ್ ಸ್ಥಾವರಗಳ ನಿರ್ವಾಹಕರ ನಿಷ್ಕ್ರಿಯತೆಯು ಕಳೆದ ವರ್ಷದ ವಿದ್ಯುತ್ ಬಿಕ್ಕಟ್ಟಿಗೆ ಪ್ರಮುಖ ಕಾರಣವಾಗಿತ್ತು. ಗಣಿ ಪ್ರದೇಶಗಳಲ್ಲಿ ಮಳೆಯ ನೀರು ತುಂಬಿಕೊಂಡು ಕಲ್ಲಿದ್ದಲು ಉತ್ಪಾದನೆಗೆ ಮತ್ತು ಸಾಗಾಣಿಕೆಗೆ ಅಡ್ಡಿಯನ್ನುಂಟು ಮಾಡುವುದರಿಂದ ಈ ಸಮಯವು ನಿರ್ಣಾಯಕವಾಗಿದೆ ಎಂದು ಸಿಆರ್ಇಎ ತನ್ನ ವರದಿಯಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News