ಮರಾಠಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರಾತಿಗೆ ಕ್ರಮ : ​ಸಚಿವ ಸುನಿಲ್ ಕುಮಾರ್

Update: 2022-05-29 17:13 GMT

ಕಾರ್ಕಳ: ಪರಿಶ್ರಮದಿಂದ ಬದುಕು ಕಟ್ಟಿಕೊಂಡು ಸ್ವಾಭಿಮಾನದ ಜೀವನವನ್ನು ನಡೆಸುತ್ತಿರುವ ಮರಾಠಿ ಸಮುದಾಯದ ಏಳಿಗೆಗಾಗಿ  ರಾಜ್ಯ ಬಿಜೆಪಿ ಸರಕಾರ ಬದ್ಧವಾಗಿದ್ದು, ಈ‌ ನಿಟ್ಟಿನಲ್ಲಿ ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಲು ಅಗತ್ಯವಾದ ಸಮುದಾಯ ಭವನ ನಿರ್ಮಾಣಕ್ಕಾಗಿ ನಿವೇಶನ ಮುಂಜೂರು ಗೊಳಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ .ಸುನಿಲ್ ಕುಮಾರ್ ಹೇಳಿದರು.

ಅವರು ಕಾರ್ಕಳ ಮಂಜುನಾಥ ಪೈ ಸಭಾಭವನದಲ್ಲಿ ರವಿವಾರ  ನಡೆದ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ್ ಅವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ  ಅಮೈ  ಮಹಾಲಿಂಗ ನಾಯ್ಕ್ ಅವರನ್ನು ಅಭಿನಂದಿಸಿ ಮಾತನಾಡಿದ ಸಚಿವ ಸುನಿಲ್ ಕುಮಾರ್,  ಹಗಲಿನಲ್ಲಿ ಕೂಲಿ ಮಾಡಿ ರಾತ್ರಿ ನೀರಿಗಾಗಿ ತಿಂಗಳುಗಟ್ಟಲೆ ಗುಡ್ಡ ಕೊರೆದು ಸತತ ಪರಿಶ್ರಮದ ಫಲವಾಗಿ ಬರಡು ಭೂಮಿಯಲ್ಲಿ ಕೃಷಿ ಮಾಡಿ ಯಶಸ್ಸು  ಕಂಡುಕೊಂಡ ಅಸಾಮಾನ್ಯ ಸಾಧಕ ಅಮೈ ಮಹಾಲಿಂಗ ನಾಯ್ಕ್ ಅವರ ಸಾಧನೆಯನ್ನು ಗುರುತಿಸಿದ ಕೇಂದ್ರ ಸರಕಾರ ಅವರಿಗೆ ದೇಶದ ಅತ್ಯುನ್ನತ ಗೌರವವಾದ ಪದ್ಮಶ್ರೀ ಗೌರವ ನೀಡಿರುವುದು ಸಮಸ್ತ ಮರಾಠಿ ಸಮುದಾಯಕ್ಕೆ ಸಿಕ್ಕಿದ ಗೌರವವಾಗಿದೆ. ತನಗೆ ಪ್ರಶಸ್ತಿ ಸಿಗಬೇಕೆಂಬ ಗುರಿಯಿಂದ ಮಹಾಲಿಂಗ ನಾಯ್ಕ್ ಈ ಸಾಧನೆ ಮಾಡಿಲ್ಲ, ಗ್ರಾಮೀಣ ಭಾಗದ ತೀರಾ ಬಡ ಕುಟುಂಬದ ಸಾಧಕನನ್ನು ಗುರುತಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡಿರುವುದು ಶ್ಲಾಘನೀಯ ಹಾಗೂ ಇವರು ಉಳಿದ ಸಾಧಕರಿಗೂ ಮಾದರಿಯಾಗಿದ್ದಾರೆ‌ ಎಂದರು.

ಕಾಯಕವೇ ಕೈಲಾಸ ಎನ್ನುವ ಮನೋಭಾವದಿಂದ  ಪರಿಶ್ರಮ ಹಾಗೂ ಸ್ವಾಭಿಮಾನಿಗಳಾಗಿ ಜೀವನ ನಡೆಸುವ ಮರಾಠಿ ಸಮುದಾಯದ ಅಭಿವೃದ್ಧಿಗಾಗಿ ಸರಕಾರ ಸದಾ ಸಿದ್ಧವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಮರಾಠಿ ಸಮುದಾಯದ ಬಡ ಕೃಷಿಕ ಮಹಾಲಿಂಗ ನಾಯ್ಕ್ ಅವರಿಗೆ ದೇಶದ ಅತ್ಯುನ್ನತ ಪದ್ಮಶ್ರೀ ಗೌರವ ಸಿಕ್ಕಿರುವುದು ಮರಾಠಿ ಸಮುದಾಯ ಕ್ಕೆ ಹೆಮ್ಮೆಯಾಗಿದೆ. ಪ್ರಶಸ್ತಿಯ ಕನಿಷ್ಠ ನಿರೀಕ್ಷೆಯೂ ಇಲ್ಲದೇ ಕಾಯಕ ಮುಂದುವರಿಸಿದ ಮಹಾಲಿಂಗ ನಾಯ್ಕ್ ಅವರು ಪದ್ಮಶ್ರೀ ಪ್ರಶಸ್ತಿ ಪಡೆಯಲು ಅತ್ಯಂತ ಅರ್ಹರು ಇದು ಮರಾಠಿ ಸಮುದಾಯಕ್ಕೆ ಸಿಕ್ಕ ಪ್ರಶಸ್ತಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಕಳ ಪುರಸಭೆ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅನಂತ ನಾಯ್ಕ್, ಮುಂಬಯಿ ಉದ್ಯಮಿ ಅಜೆಕಾರು ಕುರ್ಪಾಡಿ ಸುಧಾಕರ ನಾಯ್ಕ್ ಉಪಸ್ಥಿತರಿದ್ದರು.

ಕಾರ್ಕಳ ಮತ್ತು ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ಅಧ್ಯಕ್ಷ ಶಂಕರ ನಾಯ್ಕ್ ದುರ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಗಂಧಿ , ಕೋಶಾಧಿಕಾರಿ ಕೆ.ಪಿ ನಾಯ್ಕ್, ಸಂಘದ ಗೌರವಾಧ್ಯಕ್ಷ ಶೇಖರ್ ನಾಯ್ಕ್ ಮುದ್ರಾಡಿ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ನಾಯ್ಕ್ ಕಡ್ತಲ, ಸಂಘಟನಾ‌  ಕಾರ್ಯದರ್ಶಿ ನಾಗೇಂದ್ರ ನಾಯ್ಕ್,ಪ್ರಮೀಳಾ ,ಯುವ ವೇದಿಕೆ ಅಧ್ಯಕ್ಷ ಪವನ್ ನಾಯ್ಕ್, ಮಹಿಳಾ ವೇದಿಕೆಯ ಅಧ್ಯಕ್ಷೆ ರಾಜಶ್ರೀ , ಸಂಘದ ಮಾಜಿ ಅಧ್ಯಕ್ಷರಾದ ಉಮೇಶ್ ನಾಯ್ಕ್, ರಾಘವ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.

ಶೇಖರ್ ಕಡ್ತಲ ಸ್ವಾಗತಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ನಾಯ್ಕ್ ವಂದಿಸಿದರು. ಪದ್ಮಾಕರ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News