×
Ad

ಕಾಬೂಲ್: ತಾಲಿಬಾನ್ ನಿರ್ಬಂಧಗಳ ವಿರುದ್ಧ ಮಹಿಳೆಯರಿಂದ ಪ್ರತಿಭಟನೆ

Update: 2022-05-29 23:40 IST
PHOTO:AFP

ಕಾಬೂಲ್,ಮೇ 29: ಮಹಿಳೆಯರ ಹಕ್ಕುಗಳ ಮೇಲೆ ತಾಲಿಬಾನ್ ಆಡಳಿತ ಹಲವು ನಿರ್ಬಂಧಗಳನ್ನು ಹೇರಿರುವುದನ್ನು ವಿರೋಧಿಸಿ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ರವಿವಾರ 25ಕ್ಕೂ ಅಧಿಕ ಮಹಿಳೆಯರು ಪ್ರತಿಭಟನೆ ನಡೆಸಿದರು.

 ಶಿಕ್ಷಣ ಸಚಿವಾಲಯದ ಮುಂದೆ ಜಮಾಯಿಸಿದ ಪ್ರತಿಭಟನಾನಿರತ ಮಹಿಳೆಯರು ‘‘ ಶಿಕ್ಷಣವು ನಮ್ಮ ಹಕ್ಕು! ಶಾಲೆಗಳನ್ನು ಪುನಾರಂಭಿಸಿ!’’ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು. ಆನಂತರ ಪ್ರತಿಭಟನಕಾರರು ಕೆಲವು ಮೀಟರ್ ದೂರದವರೆಗೆ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಮಫ್ತಿಯಲ್ಲಿದ್ದ ತಾಲಿಬಾನ್ ಯೋಧರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
  ‌
‘‘ಪ್ರತಿಭಟನೆಯ ವೇಳೆ ತಾವು ನಿರ್ಣಯವೊಂದನ್ನು ಬಹಿರಂಗವಾಗಿ ಓದಲು ಬಯಸಿದ್ದೆವು.ಆದರೆ ತಾಲಿಬಾನ್ ಆಡಳಿತ ಅದಕ್ಕೆ ಅನುಮತಿ ನೀಡಲಿಲ್ಲ’’ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಫ್ಘಾನ್ ಮಹಿಳೆ ರೆಲಿಯಾ ಪರ್ಸಿ ಹೇಳಿದ್ದಾರೆ.

‘‘ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವು ಬಾಲಕಿಯರಿಂದ ಮೊಬೈಲ್ ಫೋನ್‌ಗಳನ್ನು ಭದ್ರತಾಸಿಬ್ಬಂದಿ ಕಿತ್ತುಕೊಂಡಿದ್ದಾರೆ ಹಾಗೂ ಪ್ರತಿಭಟನೆಯ ಕುರಿತಾದ ಛಾಯಾಚಿತ್ರಗಳನ್ನು ಅಥವಾ ವಿಡಿಯೋಗಳನ್ನು ತೆಗೆಯದಂತೆಯೂ ನಮ್ಮನ್ನು ತಡೆಗಟ್ಟಿದರು’’ ಎಂದು ರೆಲಿಯಾ ಪಾರ್ಸಿ ಹೇಳಿದ್ದಾರೆ.
  
ಕಳೆದ ವರ್ಷದ ಆಗಸ್ಟ್ ನಲ್ಲಿ ತಾಲಿಬಾನ್ ಅಧಿಕಾರಕ್ಕೇರಿದ ಬಳಿಕ ಹೆಣ್ಣು ಮಕ್ಕಳನ್ನು ಪ್ರೌಢಶಿಕ್ಷಣದಿಂದ ದೂರವಿಡಲಾಗಿದೆ. ಹಲವಾರು ಸರಕಾರಿ ಉದ್ಯೋಗಗಳಿಂದಲೂ ಮಹಿಳೆಯರನ್ನು ನಿಷೇಧಿಸಲಾಗಿದೆ. ಅಲ್ಲದೆ ಏಕಾಂಗಿಯಾಗಿ ಪ್ರಯಾಣಿಸದಂತೆಯೂ ಮಹಿಳೆಯರ ಮೇಲೆ ನಿರ್ಬಂಧ ವಿಧಿಸಲಾಗಿದೆ. ತಾಲಿಬಾನ್‌ನ ಪರಮೋಚ್ಛ ನಾಯಕ ಹಾಗೂ ತಾಲಿಬಾನ್ ವರಿಷ್ಠ ಹಿಬಾತುಲ್ಲಾ ಅಖುಂಡ್ಝಾದಾ ಅವರು ಮಹಿಳೆಯರು ಸಾಮಾನ್ಯವಾಗಿ ಮನೆಯಲ್ಲಿಯೇ ಉಳಿದುಕೊಳ್ಳಬೇಕೆಂದು ಹೇಳಿಕೆ ನೀಡಿದ್ದುದು ವ್ಯಾಪಕ ಖಂಡನೆಗೊಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News