ನಿಜವಾಯ್ತು ಐಪಿಎಲ್‌ ಕುರಿತು ಪ್ರಿಯಾಂಕ್‌ ಖರ್ಗೆ ನುಡಿದಿದ್ದ ಭವಿಷ್ಯ: ಗುಜರಾತ್‌ ಗೆಲ್ಲಲು ಮಾಡಲಾಗಿತ್ತೇ ಫಿಕ್ಸಿಂಗ್?

Update: 2022-05-30 15:06 GMT

ಬೆಂಗಳೂರು: ಐಪಿಎಲ್‌ ಕುರಿತು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ನುಡಿದಿದ್ದ ಭವಿಷ್ಯ ನಿಜವಾಗಿದೆ. ಐಪಿಎಲ್‌ 2022 ನಲ್ಲಿ ಗುಜರಾತ್‌ ಟೈಟಾನ್ಸ್‌ ಗೆಲ್ಲಲಿದೆ ಎಂದು ಫೈನಲ್‌ಗೂ ಎರಡು ವಾರಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಪ್ರಿಯಾಂಕ್‌ ಖರ್ಗೆ, “ಸ್ಪಷ್ಟ ಕಾರಣಗಳಿಗಾಗಿ ಗುಜರಾತ್ ಟೈಟನ್ಸ್‌ ಐಪಿಎಲ್ 2022ರ ಕಪ್‌ ಗೆಲ್ಲಲಿದೆ. ಮೋಟಾ ಭಾಯಿ ಮತ್ತು ಮಗ ಇದನ್ನು ಖಾತ್ರಿಪಡಿಸುತ್ತಾರೆ. ಐಟಿ, ಇಡಿ, ಸಿಬಿಐ ಸೇರಿದಂತೆ ಇತರೆ ಸಂಸ್ಥೆಗಳು ಯಾವಾಗ ಕೆಲಸಕ್ಕೆ ಬರುತ್ತವೆ?'ʼ ಎಂದು ಪ್ರಶ್ನಿಸಿ ಟ್ವೀಟ್‌ ಮಾಡಿದ್ದರು.

ಗುಜರಾತ್‌ ಮೂಲದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಸಿಸಿಐ ಕಾರ್ಯದರ್ಶಿಯಾಗಿರುವ ಅವರ ಪುತ್ರ ಜಯ್‌ ಶಾ ಪಂದ್ಯವನ್ನು ಫಿಕ್ಸಿಂಗ್‌ ಮಾಡಿದ್ದಾರೆ ಎಂದು ಪ್ರಿಯಾಂಕ್‌ ಖರ್ಗೆ ಹೆಸರುಗಳನ್ನು ಉಲ್ಲೇಖಿಸದೆಯೇ ಪರೋಕ್ಷವಾಗಿ ಟಾಂಗ್‌ ನೀಡಿದ್ದರು. ಎರಡು ವಾರಗಳ ಹಿಂದೆ, ಅಂದರೆ, ಮೇ 14 ರಂದು ಖರ್ಗೆ ಈ ಬಗ್ಗೆ ಟ್ವೀಟ್‌ ಮಾಡಿದ್ದಾಗ, ಈ ವಿಚಾರ ಅಷ್ಟಾಗಿ ಮಹತ್ವ ಪಡೆದಿರಲಿಲ್ಲ.

ಅಮಿತ್‌ ಶಾ ಪುತ್ರ ಬಿಸಿಸಿಐ ಕಾರ್ಯದರ್ಶಿಯಾಗಿರುವುದರಿಂದ ಹಾಗೂ ಬಿಜೆಪಿ ಜೊತೆಗಿನ ರಾಜಕಾರಣ ವಿರೋಧಗಳಿಂದಾಗಿ ಖರ್ಗೆ ಆರೋಪಿಸಿರಬಹುದು ಎಂದು ಈ ಟ್ವೀಟ್‌ ಅನ್ನು ಗಂಭೀರ ಗಣನೆಗೆ ತೆಗೆದುಕೊಂಡಿರಲಿಲ್ಲ. ಇದೀಗ, ಖರ್ಗೆ ನುಡಿದ ಭವಿಷ್ಯದಂತೆ ಗುಜರಾತ್‌ ಟೈಟಾನ್ಸ್‌ ರಾಜಸ್ಥಾನ್‌ ರಾಯಲ್ಸ್‌ ಅನ್ನು ಹೀನಾಯವಾಗಿ ಸೋಲಿಸಿ, ಪಾದಾರ್ಪಣೆಗೊಂಡ ಮೊದಲ ಟೂರ್ನಿಯಲ್ಲೇ ಕಪ್‌ ಗೆದ್ದಿರುವುದು ಪ್ರಿಯಾಂಕ್‌ ಖರ್ಗೆ ಅವರ ಟ್ವೀಟ್‌ ನಲ್ಲಿ ಹುರುಳಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News