×
Ad

ಜೂ.2ರಂದು ಬಿಜೆಪಿ ಸೇರುವುದಾಗಿ ಹಾರ್ದಿಕ ಪಟೇಲ್ ಘೋಷಣೆ

Update: 2022-05-31 11:47 IST
Photo: PTI

ಅಹ್ಮದಾಬಾದ್,ಮೇ 31: ಪಾಟಿದಾರ್ ಮೀಸಲಾತಿ ಆಂದೋಲನದ ನಾಯಕ ಹಾರ್ದಿಕ ಪಟೇಲ್ ಅವರು ಜೂ.2ರಂದು ತಾನು ಬಿಜೆಪಿಗೆ ಸೇರುವುದಾಗಿ ಮಂಗಳವಾರ ಪ್ರಕಟಿಸಿದ್ದಾರೆ. ಎರಡು ವಾರಗಳ ಹಿಂದೆ ಗುಜರಾತ್ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಸ್ಥಾನವನ್ನು ತೊರೆದಿದ್ದ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆಯನ್ನು ಸಲ್ಲಿಸಿದ್ದರು.

ಪಟೇಲ್ ಜೂ.2ರಂದು ಕೇಸರಿ ಪಕ್ಷಕ್ಕೆ ಸೇರುವುದನ್ನು ಗುಜರಾತ ಬಿಜೆಪಿ ವಕ್ತಾರ ಯಜ್ಞೇಶ ದವೆ ಅವರು ದೃಢಪಡಿಸಿದ್ದಾರೆ.

ಮೇ 18ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಸಲ್ಲಿಸಿದ್ದ ರಾಜೀನಾಮೆ ಪತ್ರದಲ್ಲಿ ಪಟೇಲ್,ಪಕ್ಷವು ಸಮಾಜದ ಮತ್ತು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದರು. ಕೇಂದ್ರ ಮತ್ತು ರಾಜ್ಯಮಟ್ಟದ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಸರಕಾರದ ಯಾವುದೇ ಕ್ರಮವನ್ನು ವಿರೋಧಿಸುವಲ್ಲಿ ಮಾತ್ರ ಆಸಕ್ತರಾಗಿದ್ದಾರೆ ಎಂದು ಅವರು ಹೇಳಿದ್ದರು.

'ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಗಂಭೀರತೆಯ ಕೊರತೆಯಿದೆ ಮತ್ತು ಗುಜರಾತ್ ನಿವಾಸಿಗಳ ಸಮಸ್ಯೆಗಳನ್ನು ಆಲಿಸಲು ಸಿದ್ಧರಿಲ್ಲ. ನಮ್ಮ ದೇಶವು ಸವಾಲುಗಳನ್ನು ಎದುರಿಸುತ್ತಿದ್ದಾಗ ಮತ್ತು ಕಾಂಗ್ರೆಸ್ ಗೆ ನಾಯಕತ್ವದ ಅಗತ್ಯವಿದ್ದಾಗ ಪಕ್ಷದ ನಾಯಕರು ವಿದೇಶದಲ್ಲಿ ಮೋಜು ಮಾಡುತ್ತಿದ್ದರು' ಎಂದೂ ಪಟೇಲ್ ಆರೋಪಿಸಿದ್ದರು.

ಕಾಂಗ್ರೆಸ್ ಹಿಂದುಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದು ಮೇ 19ರಂದು ಆರೋಪಿಸಿದ್ದ ಪಟೇಲ್, ಪೌರತ್ವ ತಿದ್ದುಪಡಿ ಕಾಯ್ದೆ,ಅಯೋಧ್ಯೆಯಲ್ಲಿ ರಾಮಮಂದಿರ ಅಥವಾ ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿರುವ ಶಿವಲಿಂಗ ಇತ್ಯಾದಿ ವಿಷಯಗಳ ಬಗ್ಗೆ ಕಾಂಗ್ರೆಸ್ ಎಂದೂ ಧ್ವನಿ ಎತ್ತುತ್ತಿಲ್ಲ ಎಂದು ಹೇಳಿದ್ದರು. ದೇಶದ್ರೋಹ ಪ್ರಕರಣಗಳಲ್ಲಿ ತಾನು ಜೈಲು ಸೇರಬಹುದು ಎಂಬ ಭೀತಿಯಿಂದ ಪಟೇಲ್ ಪಕ್ಷವನ್ನು ತೊರೆದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜಗದೀಶ ಠಾಕೋರ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News