×
Ad

ಹಾಡುತ್ತಿದ್ದಂತೆಯೇ ವೇದಿಕೆಯ ಮೇಲೆ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಮಲಯಾಳಂ ಗಾಯಕ ಎಡವ ಬಶೀರ್

Update: 2022-05-31 13:06 IST
Photo: Twitter

ತಿರುವನಂತಪುರಂ: ಕೇರಳದ ಅಲಪ್ಪುಳದಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಕುಸಿದು ಬಿದ್ದು ಮೃತಪಟ್ಟ ಜನಪ್ರಿಯ ಹಿನ್ನೆಲೆ ಗಾಯಕ ಎಡವ ಬಶೀರ್ ಅವರ ನಿಧನಕ್ಕೆ ಕೇರಳದ ಸಂಗೀತ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.

ಜನಪ್ರಿಯ ಸಂಗೀತ ತಂಡವಾದ ಭೀಮಾಸ್ ಬ್ಲೂ ಡೈಮಂಡ್ ಆರ್ಕೆಸ್ಟ್ರಾದ 50 ನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಎಡವ ಬಶೀರ್ ಹಾಡುತ್ತಲೇ ಕುಸಿದು ಬಿದ್ದಿದ್ದರು. ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿತ್ತು.

78 ವರ್ಷದ ಗಾಯಕನ ನಿಧನಕ್ಕೆ ರಾಜಕೀಯ ಮುಖಂಡರು ಮತ್ತು ಚಿತ್ರರಂಗದ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

‘ಗಾನಮೇಳ’ವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಡವ ಬಶೀರ್ ಅವರ ನಿಧನವು ಸಂಗೀತ ಲೋಕಕ್ಕೆ ಅಪಾರ ನಷ್ಟವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಹಿನ್ನೆಲೆ ಗಾಯಕಿ ಕೆ ಎಸ್ ಚಿತ್ರಾ ಟ್ವಿಟ್ಟರ್ ನಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಮಲಯಾಳಂನಲ್ಲಿ, "ಗಾಯಕ ಎಡವ ಬಶೀರ್ ಅವರಿಗೆ ಗೌರವಗಳು" ಎಂದು ಟ್ವೀಟ್ ಮಾಡಿದ್ದಾರೆ. ಎಡವ ಬಶೀರ್‌ ರ ಅಭಿಮಾನಿಗಳು ತಮ್ಮ ಶ್ರದ್ಧಾಂಜಲಿಯನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

ಎಡವ ಬಶೀರ್ 'ಮಾನೋ ಹೋ ತುಮ್' ಹಿಂದಿ ಗೀತೆಯನ್ನು ಹಾಡುತ್ತಿದ್ದರು. ಹಾಡಿನ ಕೊನೆಯಲ್ಲಿ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಎಡವ ಬಶೀರ್ ಅವರು ಅನೇಕ ಚಲನಚಿತ್ರ ಗೀತೆಗಳನ್ನು ಹಾಡಿದ್ದರು. ಅದರೊಂದಿಗೆ ರಾಜ್ಯದ ವಿವಿಧ ದೇವಾಲಯಗಳಲ್ಲಿ ತಮ್ಮ ಗಾಯನ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದರು. ಅವರ ಅಂತ್ಯಕ್ರಿಯೆ ಕಡಪ್ಪಕಡ ಜುಮಾ ಮಸೀದಿಯಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News