2014 ರ ಹರಾಜಿನಲ್ಲಿ ಮಾರಾಟವಾಗದೆ ಉಳಿದಿದ್ದ ಹಾರ್ದಿಕ್ ಪಾಂಡ್ಯ ಈಗ ಐಪಿಎಲ್ ಚಾಂಪಿಯನ್ ತಂಡದ ನಾಯಕ

Update: 2022-05-31 08:23 GMT
Photo:PTI

ಹೊಸದಿಲ್ಲಿ: ವಿಶ್ವದ ಪ್ರಮುಖ  ಟ್ವೆಂಟಿ-20 ಫ್ರಾಂಚೈಸಿ ಟೂರ್ನಮೆಂಟ್‌ ಐಪಿಎಲ್ ನಲ್ಲಿ ಚೊಚ್ಚಲ ಪ್ರಶಸ್ತಿ ಗೆಲ್ಲಲು  ಗುಜರಾತ್ ಟೈಟಾನ್ಸ್  ತಂಡವನ್ನು ಮುನ್ನಡೆಸಿದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಯಶಸ್ಸಿನ ಮೇಲೆ ಸವಾರಿ ಮಾಡುತ್ತಿದ್ದಾರೆ.  ಹಾರ್ದಿಕ್ ಅವರದು ಭಾರತೀಯ ಕ್ರೀಡೆಯಲ್ಲಿ ಮತ್ತೊಂದು ಯಶಸ್ಸಿನ ಕಥೆಯಾಗಿದ್ದು, ಸಾಮಾನ್ಯ ಮಧ್ಯಮ ವರ್ಗದ ಹುಡುಗ  ಹಾರ್ದಿಕ್ ಪಾಂಡ್ಯ ಈಗ "ಇಂಡಿಯಾ ಸ್ಟಾರ್" ಆಗಿ ಹೊರಹೊಮ್ಮಿದ್ದಾರೆ.

 ದೇಶೀಯ  ಕ್ರಿಕೆಟ್ ನಲ್ಲಿ ಅಪರಿಚಿತ ಮುಖವಾಗಿದ್ದ ಪಾಂಡ್ಯ  ಅವರು ಐಪಿಎಲ್ 2014ರ ಹರಾಜಿನಲ್ಲಿ ಮಾರಾಟವಾಗಿರಲಿಲ್ಲ. ಆದರೆ 2015 ರ ಹರಾಜಿನಲ್ಲಿ ಪಾಂಡ್ಯ ಅವರ ಅದೃಷ್ಟವು ಖುಲಾಯಿಸಿದ್ದು, ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪಾಂಡ್ಯ ಅವರನ್ನು  ಮೂಲ ಬೆಲೆ ರೂ. 10 ಲಕ್ಷಕ್ಕೆ ಖರೀದಿಸಿತು. 2015 ರಿಂದ 2021 ರವರೆಗೆ ಹಾರ್ದಿಕ್ 153.91 ಸ್ಟ್ರೈಕ್ ರೇಟ್‌ನಲ್ಲಿ 1,476 ರನ್ ಗಳಿಸಿದ್ದರು ಹಾಗೂ  42 ವಿಕೆಟ್‌ಗಳನ್ನು ಪಡೆದರು. ಕ್ರಮವಾಗಿ 2015, 2017, 2019 ಮತ್ತು 2020 ಆವೃತ್ತಿಗಳಲ್ಲಿ ಮುಂಬೈ ಇಂಡಿಯನ್ಸ್  ಪ್ರಶಸ್ತಿ ಗೆಲುವಿನ ಪ್ರಮುಖ ಭಾಗವಾಗಿದ್ದರು.

ಐಪಿಎಲ್ 2022 ರ ಮೊದಲು, ಪಾಂಡ್ಯ ಅವರು ಮುಂಬೈ ಇಂಡಿಯನ್ಸ್‌ನೊಂದಿಗೆ ನಾಲ್ಕು ಬಾರಿ  ಐಪಿಎಲ್ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದರು ಹಾಗೂ  ಪ್ರತಿಬಾರಿಯೂ ವಿಜೇತ ತಂಡದ ಸದಸ್ಯರಾಗಿ ಹೊರಹೊಮ್ಮಿದ್ದರು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರವಿವಾರ ನಡೆದ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಏಳು ವಿಕೆಟ್‌ಗಳ ಜಯ ಗಳಿಸಿ  ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಎತ್ತಿಹಿಡಿಯುವ ಮೂಲಕ ಹಾರ್ದಿಕ್  ಪಾಂಡ್ಯ ನಾಯಕತ್ವದ ತಂಡವು ತನ್ನ ಮೊದಲ ಋತುವಿನಲ್ಲಿ ಕನಸಿನ ಅಭಿಯಾನವನ್ನು ಕೊನೆಗೊಳಿಸಿತು. ಪಾಂಡ್ಯ  2014 ರಲ್ಲಿ ಮಾರಾಟವಾಗದ ಆಟಗಾರನಾಗಿ ಐಪಿಎಲ್ ಪ್ರಯಾಣವನ್ನು ಆರಂಭಿಸಿ, ಆ ನಂತರ ತಂಡವೊಂದನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ ಮೊದಲ ಆಟಗಾರನಾಗಿದ್ದಾರೆ.

ಮುಂಬೈ  ಇಂಡಿಯನ್ಸ್ ತಂಡದಲ್ಲಿದ್ದಾಗ  2015, 2017, 2019, 2020ರಲ್ಲಿ  ನಾಲ್ಕು ಬಾರಿ ಟ್ರೋಫಿ ಗೆದ್ದಿದ್ದ ಹಾರ್ದಿಕ್ ಪಾಂಡ್ಯ, ಅವರು ಈಗ  ಗುಜರಾತ್ ಟೈಟಾನ್ಸ್‌ ಪರವಾಗಿಯೂ ಪ್ರಶಸ್ತಿ ಎತ್ತಿ ಹಿಡಿದಿದ್ದಾರೆ.  ಈ ಮೂಲಕ  2010, 2011, 2018, 2021ರಲ್ಲಿ ನಾಲ್ಕು ಪ್ರಶಸ್ತಿಗಳನ್ನು ಗೆದ್ದಿದ್ದ ಎಂ.ಎಸ್. ಧೋನಿ  ದಾಖಲೆಯನ್ನು ಹಿಂದಿಕ್ಕಿದರು. 

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ  ವೇಗದ ಬೌಲರ್ ಆಗಿರುವ ಪಾಂಡ್ಯ ಭಾರತ ಪರ 11 ಟೆಸ್ಟ್, 63 ಏಕದಿನ ಮತ್ತು 54 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

ಬೆನ್ನಿನ ನೋವಿನ ಕಾರಣ ಕಳೆದ ವರ್ಷ ಟಿ-20 ವಿಶ್ವಕಪ್ ನಿಂದ ಪಾಂಡ್ಯ ಹೊರಗುಳಿದಿದ್ದರು. ಆದರೆ ಈ ವರ್ಷ  15 ಐಪಿಎಲ್  ಪಂದ್ಯಗಳಲ್ಲಿ 487 ರನ್ ಹಾಗೂ  ಎಂಟು ವಿಕೆಟ್ ಗಳೊಂದಿಗೆ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದರು.ಜೂನ್ 9 ರಂದು ಆರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟ್ವೆಂಟಿ 20 ಸರಣಿಗೆ ತಂಡಕ್ಕೆ ವಾಪಸಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News