ಮೋದಿ ಸರಕಾರಕ್ಕೆ ಎಂಟು ವರ್ಷಗಳು: ಭಾರತದ ಮಾನ ಹರಾಜಾದ ಎಂಟು ಪ್ರಸಂಗಗಳು

Update: 2022-05-31 19:30 GMT

ಕಳೆದ ಎಂಟು ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ಮೂರು ವರ್ಷಗಳಲ್ಲಿ ಮೋದಿ ಸರಕಾರ ಭಾರತವನ್ನು ಎಂತಹ ಸಾಮಾಜಿಕ, ಆರ್ಥಿಕ ಹಾಗೂ ನೈತಿಕ ಪ್ರಪಾತಕ್ಕೆ ದೂಡಿದೆ ಎಂಬುದನ್ನು ಜಗತ್ತಿನ ಎಲ್ಲಾ ಸ್ವತಂತ್ರ ಮಾಧ್ಯಮಗಳು ಹಾಗೂ ಸಂಸ್ಥೆಗಳು ವರದಿ ಮಾಡುತ್ತಿವೆ. ಅವೆಲ್ಲಕ್ಕಿಂತ ಹೆಚ್ಚಾಗಿ ಭಾರತೀಯರ ಸಾಮಾಜಿಕ-ಆರ್ಥಿಕ ಬದುಕೇ ಕಳೆದ ಎಂಟು ವರ್ಷಗಳ ಮೋದಿ ಆಡಳಿತದ ಪರಿಣಾಮಕ್ಕೆ ಜೀವಂತ ಸಾಕ್ಷಿಗಳಾಗಿವೆ.
 


ಭಾಗ-1

 ಇದೇ ಮೇ 28ಕ್ಕೆ ಮೋದಿ ಸರಕಾರ ಅಧಿಕಾರಕ್ಕೆ ಬಂದು ಎಂಟು ವರ್ಷಗಳಾದವು. ಮೇ 28 ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದು ಬ್ರಿಟಿಷರ ಜೊತೆ ಕೈಜೋಡಿಸಿದ ಹಾಗೂ ಈ ದೇಶದ ಭೌತಿಕ ವಿಭಜನೆಗೆ ಹಾಗೂ ಭಾವೈಕ್ಯದ ವಿಭಜನೆಗೆ ಪ್ರಮುಖ ಕಾರಣಕರ್ತರಾದ ಸಾವರ್ಕರ್ ಹುಟ್ಟಿದ ದಿನವೂ ಹೌದು. 2014ರಲ್ಲಿ ಮತ್ತು ಆ ನಂತರ ಎರಡನೇ ಬಾರಿ 2019ರಲ್ಲಿ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸುವುದಕ್ಕೆ ಮೋದಿ ಸರಕಾರ ಇದೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದು ಕಾಕತಾಳೀಯವೇನಲ್ಲ. ಅದೇ ರೀತಿ ಮೋದಿ ಸರಕಾರ ವಿಶ್ವಸಂಸ್ಥೆಯ ಜೊತೆ ನಿರಂತರ ಅನುಸಂಧಾನ ಮಾಡಿ ಜೂನ್ 21ನ್ನು ‘ವಿಶ್ವ ಯೋಗ ದಿನ’ವೆಂದು ಘೋಷಿಸುವಂತೆ ಮಾಡಿದ್ದೂ ಕಾಕತಾಳೀಯವೇನಲ್ಲ. ಅದು ಮೋದಿ ಮತ್ತು ಬಿಜೆಪಿಯವರ ಗುರುಮಠವಾದ ಹಾಗೂ ಸಾವರ್ಕರ್ ಸೈದ್ಧಾಂತಿಕ ಪ್ರೇರಣೆಯಿಂದ ಈ ದೇಶವನ್ನು ಬಂಧುತ್ವದ ಬದಲು ಹಿಂದುತ್ವದ ಮೇಲೆ ಮರುನಿರ್ಮಾಣ ಬಯಸುವ ಆರೆಸ್ಸೆಸ್‌ನ ಸಂಸ್ಥಾಪಕ ಹೆಡಗೆವಾರ್ ಹುಟ್ಟಿದ ದಿನ. ಹೀಗಾಗಿ ಇವು ಮೋದಿಯವರು ಕೊಟ್ಟ ಗುರುಕಾಣಿಕೆಗಳು ಮಾತ್ರವಲ್ಲ. ಭಾರತದ ಭವಿಷ್ಯದ ದಿಕ್ಸೂಚಕಗಳೂ ಆಗಿದ್ದವು.

ಈ ವರ್ಷ ಮೇ 28ರಂದು ತಮ್ಮ ತವರಾದ ಗುಜರಾತ್‌ನಲ್ಲಿ ತಮ್ಮ ಅಧಿಕಾರ ‘ಗ್ರಹಣ’ದ ಎಂಟನೇ ವರ್ಷದ ಭಾಷಣವನ್ನು ಮಾಡುತ್ತಾ ಮೋದಿಯವರು ಕಳೆದ ಎಂಟು ವರ್ಷಗಳಲ್ಲಿ ಭಾರತದ ಜನತೆ ನಾಚಿಕೆಯಿಂದ ತಲೆತಗ್ಗಿಸುವಂತಹ ಒಂದೂ ಕೆಲಸವನ್ನು ಮಾಡಿಲ್ಲ ಎಂದು ಕೊಚ್ಚಿಕೊಂಡಿದ್ದಾರೆ. ಈ ಮಾತನ್ನು ಕಣ್ಣು-ಕಿವಿ ಮತ್ತು ಹೊಟ್ಟೆ-ಹೃದಯ ಹಾಗೂ ಮೆದುಳಿರುವವರು ಯಾರೂ ಒಪ್ಪಲಾರರು ಎನ್ನುವುದು ಬೇರೇಯೇ ಮಾತು. ಪ್ರಾಯಶಃ ಯಾವುದೇ ಅಧಿಕಾರರೂಢ ಸರಕಾರಗಳೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಹಾಗೆ ನೋಡಿದರೆ ಭಾರತವು ನಾಚಿ ತಲೆತಗ್ಗಿಸುವಂತಹ ಕೆಲಸಗಳನ್ನು ಈ ಹಿಂದಿನ ಸರಕಾರಗಳೂ ಮಾಡಿದ್ದವು. ಉದಾಹರಣೆಗೆ 1975ರಲ್ಲಿ ಇಂದಿರಾಗಾಂಧಿಯವರು ಪ್ರಜಾಸತ್ತೆಯನ್ನು ಬರ್ಖಾಸ್ತು ಮಾಡಿ ಸರ್ವಾಧಿಕಾರವನ್ನು ಜಾರಿ ಮಾಡಿದ್ದರು. ಸಿಖ್ಖರ ಸ್ವರ್ಣ ದೇಗುಲದ ಮೇಲೆ ಮಿಲಿಟರಿ ದಾಳಿ ನಡೆಸಿ ಅಪವಿತ್ರಗೊಳಿಸಿದ್ದರು. ಅಧಿಕಾರದಲ್ಲಿರುವಷ್ಟೂ ಕಾಲ ಅದನ್ನು ಸಮರ್ಥಿಸಿಕೊಳ್ಳುವ ವಂದಿಮಾಗಧರನ್ನು ಸಾಕಿಕೊಂಡಿದ್ದರು. ಆದರೂ, ಆ ನಂತರ ಸೋನಿಯಾ ಗಾಂಧಿ, ತುರ್ತುಸ್ಥಿತಿ ಜಾರಿ ಮಾಡಿದ್ದು ಪ್ರಮಾದ ಎಂದು ಒಂದೆರೆಡು ಸಾರಿ ಹೇಳಿದ್ದಾರೆ. ಅದೇ ರೀತಿ 1984ರಲ್ಲಿ ನಡೆದ ಸಿಖ್ ನರಮೇಧಕ್ಕೆ ಪ್ರಾಯಶ್ಚಿತ್ತದ ರೂಪದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಸ್ವರ್ಣ ದೇಗುಲದಲ್ಲಿ ಸಮುದಾಯ ಸೇವೆ ಮಾಡಿದ್ದರು.

ಕಾಂಗ್ರೆಸ್‌ನಲ್ಲಿ ಹಾಗಿದ್ದರೆ ಮನಪರಿವರ್ತನೆ ಆಗಿದೆಯೇ? ಒಂದು ವೇಳೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಇವನ್ನೆಲ್ಲಾ ಮಾಡದಷ್ಟು ಸೈದ್ಧಾಂತಿಕವಾಗಿ ಬದಲಾಗಿದೆಯೇ ಅಥವಾ ಇವೆಲ್ಲಾ ದೂರಗಾಮಿ ರಾಜಕೀಯ-ಚುನಾವಣಾ ಲೆಕ್ಕಾಚಾರದ ಭಾಗವೇ ಎಂಬುದರ ಉತ್ತರವು ಕಾಂಗ್ರೆಸ್ ಪರ್ಯಾಯದ ಬಗ್ಗೆ ಇರುವ ಆಸೆ-ದುರಾಸೆ-ಹತಾಶೆಗಳನ್ನು ಆಧರಿಸಿರುತ್ತದೆ. ಅದೇನೇ ಇದ್ದರೂ ಕಾಂಗ್ರೆಸ್ ತಪ್ಪುಮಾಡಿದ್ದು ಹಾಗೂ ಕ್ಷಮೆ ಕೇಳಿದ್ದು ಎರಡೂ ಇತಿಹಾಸ. ಆದರೆ ಇದೇ ಮಾತನ್ನು ಮೋದಿಯವರ ಬಿಜೆಪಿ ಸರಕಾರದ ಬಗ್ಗೆ ಹೇಳಲು ಸಾಧ್ಯವೇ? ನರೇಂದ್ರ ಮೋದಿಯವರು ತಮ್ಮ ಉಸ್ತುವಾರಿಯಲ್ಲಿ ನಡೆದ ಗುಜರಾತ್ ನರಮೇಧದ ಬಗ್ಗೆ ಈವರೆಗೆ ಒಂದು ಮಾತಿನ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿಲ್ಲ. ಬದಲಿಗೆ ಗುಜರಾತ್ ಮಾದರಿ ನರಮೇಧವನ್ನು ಅಸ್ಸಾಂ, ಕರ್ನಾಟಕ, ಉತ್ತರ ಪ್ರದೇಶ, ಮಧ್ಯಪ್ರದೇಶವನ್ನೂ ಒಳಗೊಂಡಂತೆ ದೇಶದುದ್ದಕ್ಕೂ ಪ್ರಯೋಗಿಸುತ್ತಿದ್ದಾರೆ. ಕಳೆದ ಎಂಟು ವರ್ಷಗಳಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ಮೂರು ವರ್ಷಗಳಲ್ಲಿ ಮೋದಿ ಸರಕಾರ ಭಾರತವನ್ನು ಎಂತಹ ಸಾಮಾಜಿಕ, ಆರ್ಥಿಕ ಹಾಗೂ ನೈತಿಕ ಪ್ರಪಾತಕ್ಕೆ ದೂಡಿದೆ ಎಂಬುದನ್ನು ಜಗತ್ತಿನ ಎಲ್ಲಾ ಸ್ವತಂತ್ರ ಮಾಧ್ಯಮಗಳು ಹಾಗೂ ಸಂಸ್ಥೆಗಳು ವರದಿ ಮಾಡುತ್ತಿವೆ. ಅವೆಲ್ಲಕ್ಕಿಂತ ಹೆಚ್ಚಾಗಿ ಭಾರತೀಯರ ಸಾಮಾಜಿಕ-ಆರ್ಥಿಕ ಬದುಕೇ ಕಳೆದ ಎಂಟು ವರ್ಷಗಳ ಮೋದಿ ಆಡಳಿತದ ಪರಿಣಾಮಕ್ಕೆ ಜೀವಂತ ಸಾಕ್ಷಿಗಳಾಗಿವೆ. ಅಷ್ಟು ಮಾತ್ರವಲ್ಲ. ಮೋದಿಯವರ ಆಡಳಿತದಲ್ಲಿ ತೆಗೆದುಕೊಂಡಿರುವ ಅವಿವೇಕದ ಹಾಗೂ ದುಷ್ಟತನದ ಹಲವಾರು ಕ್ರಮಗಳು ಭಾರತದ ಜನರು ವಿಶ್ವದೆದುರು ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದೆ. ಆದರೂ ಮೋದಿಯವರು ಕಳೆದ ಎಂಟು ವರ್ಷಗಳಲ್ಲಿ ಭಾರತದ ಜನರು ತಲೆತಗ್ಗಿಸುವುದಿರಲಿ, ಹೆಮ್ಮೆಯಿಂದ ತಲೆ ಎತ್ತಿ ನಡೆಯುವಂತೆ ಮಾಡಿದ್ದೇನೆ ಎಂದು ಕೊಚ್ಚಿಕೊಂಡಿದ್ದಾರೆ. ಈ ಲೇಖನದಲ್ಲಿ ಕಳೆದ ಎಂಟು ವರ್ಷಗಳಲ್ಲಿ ಭಾರತವು ಮೋದಿ ಸರಕಾರದ ನಡೆಗಳಿಂದಾಗಿ ವಿಶ್ವದೆದುರು ಹಿಂದೆಂದೂ ಇಲ್ಲದಷ್ಟು ಅವಮಾನಕ್ಕೀಡಾದ ಹಲವೆಂಟು ಪ್ರಕರಣಗಳಲ್ಲಿ ಎಂಟೇ ಎಂಟನ್ನು ನೆನಪಿಸಿಕೊಳ್ಳಲಾಗಿದೆ!

ಅವಮಾನ-1: ವಿಶ್ವದೆದುರು ಬೆತ್ತಲಾದ ಅವಿವೇಕಿ ನೋಟು ನಿಷೇಧ
2016ರ ನವೆಂಬರ್ 8ರಂದು ಮೋದಿ ಮತ್ತವರ ಆಪ್ತಮಂತ್ರಿಗಳು ರಿಸರ್ವ್ ಬ್ಯಾಂಕಿನೊಂದಿಗೂ ಸಮಾಲೋಚಿಸದೆ, ಈ ಹಿಂದಿನ ರಿಸರ್ವ್ ಬ್ಯಾಂಕ್ ಗವರ್ನರ್ ಯಾವ ಕಾರಣಕ್ಕೂ ನೋಟು ನಿಷೇಧದಂತಹ ಅವಿವೇಕಿ ಕ್ರಮಕ್ಕೆ ಮುಂದಾಗಬಾರದೆಂದು ಸಲಹೆ ನೀಡಿದ್ದರೂ, ಜಗತ್ತಿನ ಯಾವ ಅನುಭವಗಳನ್ನೂ ಗಣನೆಗೆ ತೆಗೆದುಕೊಳ್ಳದೆ ಚಲಾವಣೆಯಲ್ಲಿದ್ದ ಶೇ.86ರಷ್ಟು ನೋಟುಗಳನ್ನು ದಿಢೀರ್ ವಾಪಸ್ ತೆಗೆದುಕೊಂಡು ಇಡೀ ಆರ್ಥಿಕತೆಯ ದಿಕ್ಕೆಡಿಸಿದರು. ಈ ಹುಚ್ಚು ಕ್ರಮವನ್ನು ಐಎಂಎಫ್, ವಿಶ್ವಬ್ಯಾಂಕ್, ಎಡಿಬಿಯಂತಹ ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹಾಗೂ ಜಗತ್ತಿನ ಬಹುಪಾಲು ಸ್ವತಂತ್ರ ಆರ್ಥಿಕ ಅಧ್ಯಯನ ಸಂಸ್ಥೆಗಳು ಮಾತ್ರವಲ್ಲ ಸರಕಾರಗಳೂ ಕೂಡಾ ಸ್ಪಷ್ಟವಾಗಿ ಅವಿವೇಕದ ಕ್ರಮವೆಂದೇ ಬಣ್ಣಿಸಿತು. ಕಪ್ಪುಹಣವನ್ನು ತಡೆಗಟ್ಟಲು ನೋಟುನಿಷೇಧವು ಒಂದು ಪರಿಣಾಮಕಾರಿ ಕ್ರಮವೇ ಅಲ್ಲ. ಏಕೆಂದರೆ ಈಗ ಕಪ್ಪುಹಣ ಮತ್ತು ಕಪ್ಪುಸಂಪತ್ತಿನ ಉತ್ಪಾದನೆ, ಸಂಗ್ರಹಣೆ ಮತ್ತು ವರ್ಗಾವಣೆ ನೋಟುಗಳ ಮೂಲಕ ನಡೆಯುವುದೇ ಇಲ್ಲವೆಂದು ಅಂತರ್‌ರಾಷ್ಟ್ರೀಯ ಸಮುದಾಯ ಭಾರತಕ್ಕೆ ಕಿವಿಹಿಂಡಿ ಬುದ್ಧಿ ಹೇಳಿತ್ತು. ಅದರೆ ಆ ವೇಳೆಗಾಗಲೇ ದೂರಗಾಮಿ ಆರ್ಥಿಕ ಅನಾಹುತ ಸಂಭವಿಸಿ ಆಗಿತ್ತು. ಆದ್ದರಿಂದ ಕೂಡಲೇ ಮೋದಿ ಸರಕಾರ ನೋಟು ನಿಷೇಧದ ಉದ್ದೇಶ ಕಪ್ಪುಹಣವನ್ನು ತಡೆಗಟ್ಟುವುದಲ್ಲ, ನೋಟು ಚಲಾವಣೆ ತಗ್ಗಿಸಿ ಡಿಜಿಟಲ್ ಎಕಾನಮಿಗೆ ಭಾರತವನ್ನು ಸಜ್ಜುಗೊಳಿಸುವುದು ಎಂದು ಗುರಿಯನ್ನೇ ಬದಲಿಸಿತು. ಆಗಲೂ ಜಾಗತಿಕ ಸಮುದಾಯ ಡಿಜಿಟಲ್ ಎಕಾನಮಿಯನ್ನು ಹೀಗೆ ಏಕಾಏಕಿ ನೋಟುನಿಷೇಧದ ಮೂಲಕ ಮಾಡಲಾಗದು. ಅದಕ್ಕೆ ಡಿಜಿಟಲ್ ಪರಿಕರಗಳ ಸೌಲಭ್ಯ, ಜನರ ಮನೋಭಾವ, ವಹಿವಾಟು ಸುಗಮತೆ ಎಲ್ಲವನ್ನು ಕಲ್ಪಿಸುತ್ತಾ ಹಂತಹಂತವಾಗಿ ಜಾರಿಮಾಡಬೇಕಾದ ಕ್ರಮ ಎಂದು ತಿಳಿಹೇಳಿತು. ಭಾರತ ಸರಕಾರದ ಅವಿವೇಕ ಆಗ ಇಡೀ ಜಗತ್ತಿನ ಮುಂದೆ ಬಯಲಾಗಿತ್ತು. ನೋಟುನಿಷೇಧಕ್ಕೆ ಮುಂಚೆ ಭಾರತದ ಆರ್ಥಿಕತೆಯಲ್ಲಿ 18 ಲಕ್ಷ ಕೋಟಿ ನೋಟುಗಳು ಚಲಾವಣೆಯಲ್ಲಿದ್ದರೆ, ನೋಟು ನಿಷೇಧದ ಆರು ವರ್ಷಗಳ ನಂತರ ಆ ಪ್ರಮಾಣ ಕಡಿಮೆಯಾಗುವುದಿರಲಿ 31 ಲಕ್ಷ ಕೋಟಿಗೆ ಏರಿಕೆಯಾಗಿದೆ! ಸರಕಾರವೊಂದರ ನೀತಿಯೊಂದು ದೇಶವನ್ನು ಇಂತಹ ಸಂಕಷ್ಟಕ್ಕೂ ಹಾಗೂ ಜಗತ್ತಿನೆದುರು ಇಂತಹ ಅಪಮಾನಕ್ಕೂ ಎಂದೂ ಗುರಿಮಾಡಿರಲಿಲ್ಲ.

ಅವಮಾನ-2: ನಗೆಪಾಟಲಿಗೀಡಾದ ಜಿಎಸ್‌ಟಿ 
ಗೂಡ್ಸ್ ಆ್ಯಂಡ್ ಸರ್ವೀಸ್ ಟ್ಯಾಕ್ಸ್- ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಎಂಬುದು ಶ್ರೀ ಸಾಮಾನ್ಯರ ಮೇಲೆ ತೆರಿಗೆ ಹೊರೆ ಜಾಸ್ತಿ ಮಾಡುವ ಪರೋಕ್ಷ ತೆರಿಗೆ ವ್ಯವಸ್ಥೆ. ಈ ವಿಧಾನ ಜಾರಿಗೆ ಬಂದದ್ದೇ ಜನರನ್ನು ಸರಾಗವಾಗಿ ಸುಲಿಯಲೆಂದು ಹಾಗೂ ದೊಡ್ದ ಉದ್ಯಮ ಹಾಗೂ ದೊಡ್ದ ವ್ಯಾಪಾರಸ್ಥರ ವ್ಯವಹಾರಗಳು ಬಗೆಬಗೆಯ ತೆರಿಗೆ ಗೋಜಲಿಗೆ ಸಿಲುಕದೆ ಸುಗಮವಾಗಿ ನಡೆಯಲೆಂದು. ಆದ್ದರಿಂದಲೇ ಜಗತ್ತಿನಾದ್ಯಂತ ವ್ಯಾಟ್ ಅಥವಾ ಜಿಎಸ್‌ಟಿ ವ್ಯವಸ್ಥೆ ಜಾರಿ ಮಾಡಿರುವ ದೇಶಗಳು ಒಂದೇ ತೆರಿಗೆ ದರ ಹೆಚ್ಚೆಂದರೆ ಎರಡು ತೆರಿಗೆ ದರಗಳನ್ನು ಹೊಂದಿರುತ್ತವೆ ಹಾಗೂ ಅವನ್ನು ಜಾರಿ ಮಾಡುವ ಮೊದಲು ಅದರ ಸುಲಭ ಜಾರಿಗೆ ಅಗತ್ಯವಿರುವ ಆಡಳಿತಾತ್ಮಕ ತಯಾರಿ ಹಾಗೂ ಜನರಲ್ಲಿ ಅರಿವನ್ನು ಮೂಡಿಸಿ ನಂತರ ಜಾರಿ ಮಾಡುತ್ತಾರೆ. ಆದರೆ ಭಾರತದಂತಹ ವಿವಿಧ ಹಂತದ ಆರ್ಥಿಕ ವಿಕಾಸದ ಘಟ್ಟದಲ್ಲಿರುವ ರಾಜ್ಯಗಳ ಒಕ್ಕೂಟದಲ್ಲಿ ಅಂಬೇಡ್ಕರ್ ಹೇಳಿದಂತೆ ಪರೋಕ್ಷ ತೆರಿಗೆ ಹೆಚ್ಚಳಕ್ಕಿಂತ ಶ್ರೀಮಂತರ ಮೇಲೆ ಹಾಗೂ ಸರಾಸರಿಗಿಂತ ಅಧಿಕ ಹಾಗೂ ನಿಶ್ಚಿತ ಆದಾಯ ಹೊಂದಿರುವ ವರ್ಗಗಳ ಮೇಲೆ ತೆರಿಗೆಯನ್ನು ಹೇರುವುದು ಸೂಕ್ತವಾದ ಪದ್ಧತಿಯಾಗಿತ್ತು. ಆದರೆ ಅದನ್ನು ನಿರಾಕರಿಸಿ ವ್ಯವಹಾರಸ್ಥರಿಗೆ ಅನುಕೂಲ ಮಾಡಿಕೊಡಲೆಂದು ಜಿಎಸ್‌ಟಿ ವ್ಯವಸ್ಥೆಯನ್ನು ಜಾರಿ ಮಾಡಲು ಮುಂದಾದ ಮೋದಿ ಸರಕಾರ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡಿರಲಿಲ್ಲ ಹಾಗೂ ಜನರಿಗೆ ಅದರ ಅರಿವನ್ನು ಮೂಡಿಸಿರಲಿಲ್ಲ. ಜೊತೆಗೆ ಎಂಟರಿಂದ ಹತ್ತು ಬಗೆಯ ವಿವಿಧ ತೆರಿಗೆ ದರಗಳನ್ನು ವಿಧಿಸಿ ಒಟ್ಟಾರೆ ವಹಿವಾಟನ್ನು ಹಿಂದಿಗಿಂತ ಹೆಚ್ಚಿನ ಗೋಜಲು ಮಾಡಿಟ್ಟಿತು. ಇಷ್ಟೆಲ್ಲಾ ಆಗಿ ತೆರಿಗೆ ಸಂಗ್ರಹವೂ ಹೆಚ್ಚಾಗಲಿಲ್ಲ. ತೆರಿಗೆ ಮೋಸ, ಕಪ್ಪುಹಣ ಏರಿಕೆಗಳೂ ನಿಲ್ಲಲಿಲ್ಲ. ಅಂತರ್‌ರಾಷ್ಟ್ರೀಯ ಆರ್ಥಿಕ ಸಮುದಾಯ ಹಾಗೂ ಪರಿಣಿತರು ಆಗಲೂ ಮೋದಿ ನೇತೃತ್ವದ ಭಾರತ ಸರಕಾರದ ಅವಿವೇಕ ಹಾಗೂ ದುಡುಕುತನಗಳ ಬಗ್ಗೆ ಬಹಿರಂಗವಾಗಿಯೇ ಟೀಕೆಗಳನ್ನು ಮಾಡಿದ್ದರು. ನೋಟು ನಿಷೇಧದ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಜಿಎಸ್‌ಟಿ ಹೊಡೆತಕ್ಕೆ ಭಾರತವನ್ನು ಗುರಿಮಾಡಿದ ಸಂವೇದನಾ ಶೂನ್ಯತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದವು.

ಅವಮಾನ-3: ರೈತ ಹೋರಾಟವನ್ನು ನಡೆಸಿಕೊಂಡ ರೀತಿಯ ಬಗ್ಗೆ ಜಾಗತಿಕ ಛೀಮಾರಿ
ಇತ್ತೀಚಿನ ಇತಿಹಾಸದಲ್ಲೇ ಅಭೂತಪೂರ್ವವಾದ ರೈತ ಚಳವಳಿಯೊಂದು ಇದೇ ಮೋದಿ ಅವಧಿಯಲ್ಲಿ ನಡೆಯಿತು. ಒಂದು ವರ್ಷಕ್ಕೂ ಮೀರಿ ಲಕ್ಷಾಂತರ ರೈತರು ರೈತ ವಿರೋಧಿ ಕಾನೂನುಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿ ದಿಲ್ಲಿಯ ಹೊರವಲಯದಲ್ಲಿ ಧರಣಿ ಕೂತಿದ್ದರು. ಒಂದು ಜವಾಬ್ದಾರಿಯುತ ಸರಕಾರ ಘನತೆಯಿಂದ ಅವರ ಜೊತೆ ಮಾತುಕತೆ ನಡೆಸಿ ತನ್ನ ತಪ್ಪನ್ನು ತಿದ್ದುಕೊಳ್ಳಬೇಕಿತ್ತು. ಆದರೆ ಮೋದಿ ಸರಕಾರ ಪ್ರಾರಂಭದಿಂದಲೂ ಆ ಹೋರಾಟವನ್ನು ಮುರಿಯಲು ತಂತ್ರ-ಕುತಂತ್ರಗಳನ್ನು ಪ್ರಯೋಗಿಸಿತು. ಮುಳ್ಳಿನ ಬೇಲಿ, ಗೂಂಡಾ ದಾಳಿ, ಭಯೋತ್ಪಾದಕರೆನ್ನುವ ಪಟ್ಟಿ, ಒಡಕು ತರುವ ಪ್ರಯತ್ನ, ದುಷ್ಟ ಅಪಪ್ರಚಾರಗಳನ್ನು ನಡೆಸಿತು. ಅದರೆ ಜಗತ್ತಿನಾದ್ಯಂತ ಈ ರೈತ ಚಳವಳಿಗೆ ಅಪರೂಪದ ಬೆಂಬಲ ದಕ್ಕಿತು. ಕೆನಡಾ, ಅಮೆರಿಕ, ಐರೋಪ್ಯ ಒಕ್ಕೂಟದ ಸಂಸತ್ತುಗಳು ಅಧಿಕೃತವಾಗಿ ರೈತ ಹೋರಾಟವನ್ನು ಬೆಂಬಲಿಸಿ ಮೋದಿ ಸರಕಾರದ ಕ್ರಮಗಳನ್ನು ಟೀಕಿಸಿದವು.

ಇದರ ಜೊತೆಗೆ, ಜಾಗತಿಕ ಸಮುದಾಯಕ್ಕೆ ರೈತ ಚಳವಳಿ ಏಕೆ ನಡೆಯುತ್ತಿದೆ ಎಂಬುದರ ಅರಿವು ಕೊಡುವ ಸಮಗ್ರ ಮಾಹಿತಿ ಕಿಟ್ ಒಂದನ್ನು ಹೋರಾಟಗಾರರ ಬೆಂಬಲಿಗರು ತಯಾರಿಸಿದ್ದರೆ ಮೋದಿ ಸರಕಾರ ಅದನ್ನು ಅಂತರ್‌ರಾಷ್ಟ್ರೀಯ ಷಡ್ಯಂತ್ರದ ಟೂಲ್ ಕಿಟ್ ಎಂದು ಬಣ್ಣಿಸಿ ದಿಶಾ ರವಿ ಹಾಗೂ ಇನ್ನಿತರ ಕಾರ್ಯಕರ್ತರನ್ನು ದೇಶದ್ರೋಹಿ ಕಾಯ್ದೆಯಡಿ ಬಂಧಿಸಿತು. ಇದನ್ನು ಇಡೀ ನಾಗರಿಕ ಜಗತ್ತು ತೀವ್ರವಾಗಿ ಖಂಡಿಸಿತು. ಪ್ರಾಯಶಃ ಸ್ವತಂತ್ರ ಭಾರತದಲ್ಲಿ ಯಾವೊಂದು ಸರಕಾರವು ಭಾರತವನ್ನು ಇಷ್ಟೊಂದು ಅಪಮಾನಕ್ಕೆ ಗುರಿ ಮಾಡಿರಲಿಲ್ಲ.

ಅವಮಾನ 4: ಭೀಮಾ ಕೋರೆಗಾಂವ್ ಬಂಧನಗಳು ಮತ್ತು ಪೆಗಾಸಸ್ ಷಡ್ಯಂತ್ರಗಳು
2018ರಲ್ಲಿ ಭೀಮಾ-ಕೋರೆಗಂವ್ ಮೇಳದ ಮೇಲೆ ಸಂಘೀ ಗೂಂಡಾಗಳು ಹಂತಕ ದಾಳಿ ನಡೆಸಿದ ನಂತರ ಹಂತಕರನ್ನು ಬಂಧಿಸುವ ಬದಲಿಗೆ ದಾಳಿಗೆ ಗುರಿಯಾದ ದಲಿತರ ಮೇಲೆಯೇ ಮಹಾರಾಷ್ಟ್ರದ ಬಿಜೆಪಿ ಸರಕಾರ ದಾಳಿ ನಡೆಸಿತು. ಆ ನಂತರ ಮೋದಿ ಸರಕಾರ ಆ ಪ್ರಕರಣದ ಸಂಘೀ ರೂವಾರಿಗಳನ್ನು ಬಿಟ್ಟು ಸುಧಾ ಭಾರದ್ವಾಜ್, ವರವರರಾವ್, ಸ್ಟಾನ್ ಸ್ವಾಮಿ, ಆನಂದ ತೇಲ್ತುಂಬ್ಡೆ, ಹಾಗೂ ಇನ್ನಿತರ 16 ಗಣ್ಯ ಚಿಂತಕರು, ಕವಿಗಳು, ಜನಪರ ವಕೀಲರು ಹಾಗೂ ಹೋರಾಟಗಾರರನ್ನು ಭಯೋತ್ಪಾದಕ ಕಾಯ್ದೆಯಡಿ ಬಂಧಿಸಿ ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿ ಕೊಳೆಯುವಂತೆ ಮಾಡಿದೆ. ಬಂಧನಕ್ಕೊಳಗಾಗಿದ್ದ ಸಂತ ಪಾದ್ರಿ ಸ್ಟಾನ್ ಸ್ವಾಮಿಯವರು 83 ವಯಸ್ಸಿನ ವೃದ್ಧರಾಗಿದ್ದರೂ, ಅನಾರೋಗ್ಯ ಪೀಡಿತರಾಗಿದ್ದರೂ ಅವರಿಗೆ ಕುಡಿಯಲು ನೀರು ಕೂಡ ಕೊಡದೆ ಜೈಲಿನಲ್ಲೇ ಸಾಯುವಂತೆ ಮೋದಿ ಸರಕಾರ ಮಾಡಿತು. ಇದನ್ನು ಜಗತ್ತಿನ ಹಲವಾರು ಸರಕಾರಗಳು ಹಾಗೂ ನಾಗರಿಕ ಜಗತ್ತು ಉಗ್ರವಾಗಿ ಖಂಡಿಸಿತು. ಕಳೆದ ವರ್ಷ ಪತ್ರಿಕೆಗಳು ಬಯಲು ಮಾಡಿರುವಂತೆ ಇಸ್ರೇಲಿನಿಂದ ಪೆಗಾಸಸ್ ಬೇಹುಗಾರಿಕೆ ತಂತ್ರಜ್ಞಾನವನ್ನು ಸಂವಿಧಾನ ಬಾಹಿರವಾಗಿ ಪಡೆದುಕೊಂಡಿರುವ ಮೋದಿ ಸರಕಾರ, ಅದನ್ನು ಈ ಬಂಧಿತರ ವಿರುದ್ಧ ಸುಳ್ಳು ಸಾಕ್ಷ ಸೃಷ್ಟಿ ಮಾಡಲು ಬಳಸಿಕೊಂಡಿದೆ. ಇದೆಲ್ಲದರ ಪರಿಣಾಮವಾಗಿ ಜಾಗತಿಕ ನಾಗರಿಕ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತವು ಹಿಂದೆಂದಿಗಿಂತಲೂ ಅತ್ಯಂತ ಹೀನಾಯ ಮಟ್ಟಕ್ಕೆ ಇಳಿದಿದೆ. ಭಾರತವು ಮೋದಿ ಸರಕಾರದಡಿಯಲ್ಲಿ ನಾಚಿಕೆಯಿಂದ ತಲೆತಗ್ಗಿಸುವಂತಾಗಿದೆ.

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News