×
Ad

ʼನಿಮ್ಮ ಮಧ್ಯಪ್ರದೇಶ ಯಾಕೆ ಬೆಳೆಯುತ್ತಿದೆ?ʼ: ವ್ಯಕ್ತಿಯ ಹೊಟ್ಟೆಯ ಕುರಿತು ಮಮತಾ ಬ್ಯಾನರ್ಜಿ ಪ್ರಶ್ನೆ

Update: 2022-06-01 00:06 IST
PHOTO:TWITTER

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತುಂಬಿದ ಸಭೆಯಲ್ಲಿ ಕಾರ್ಯಕರ್ತರೊಬ್ಬರ ದೇಹವನ್ನು ಲೇವಡಿ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ. 

ವೇದಿಕೆಯ ಮೇಲಿರುವ ಬ್ಯಾನರ್ಜಿ, ಸಭೆಯಲ್ಲಿದ್ದ ವ್ಯಕ್ತಿಯೊಬ್ಬರೊಡನೆ ನಿಮ್ಮ ಹೊಟ್ಟೆ ಏಕೆ ಬೆಳೆಯುತ್ತಿದೆ ಎಂದು ಪ್ರಶ್ನಿಸಿದ್ದಾರೆ. ನಿಮಗೇನಾದರೂ ಅಸ್ವಸ್ಥತೆ ಇದೆಯೇ? ನೀವು ಯಾವುದೇ ದಿನ ಬೀಳಬಹುದು ಎಂದು ಮಮತಾ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ. 

ಮುಖ್ಯಮಂತ್ರಿಯವರ ಪ್ರಶ್ನೆಗೆ ಸಾವಧಾನವಾಗಿಯೇ ಉತ್ತರಿಸಿದ ವ್ಯಕ್ತಿ, “ ಇಲ್ಲ ನನಗೆ ಯಾವ ಸಮಸ್ಯೆಯೂ ಇಲ್ಲ. ನಾನು ಫಿಟ್‌ ಆಗಿದ್ದೇನೆ, ಸಕ್ಕರೆಯೂ (ಖಾಯಿಲೆ) ಇಲ್ಲ, ಒತ್ತಡವೂ ಇಲ್ಲ” ಎಂದು ಹೇಳುತ್ತಾರೆ. ಅದಾಗ್ಯೂ, ಅದನ್ನು ಒಪ್ಪದ ಸಿಎಂ ಬ್ಯಾನರ್ಜಿ, “ಖಂಡಿತವಾಗಿಯೂ ಏನಾದರೂ ಸಮಸ್ಯೆ ಇದೆ... ಇಷ್ಟು ವಿಶಾಲವಾದ ಮಧ್ಯಪ್ರದೇಶವನ್ನು ನೀವು ಹೇಗೆ ಹೊಂದುತ್ತೀರಿ," ಎಂದು ಪ್ರಶ್ನಿಸಿದ್ದಾರೆ. ವ್ಯಕ್ತಿಯ ಹೊಟ್ಟೆಯ ಭಾಗವನ್ನು ಅವರು ʼಮಧ್ಯಪ್ರದೇಶʼ ಎಂದು ಸಂಬೋಧಿಸಿದ್ದಾರೆ. 

ನನಗೇನೂ ಸಮಸ್ಯೆ ಇಲ್ಲ, ನಾನು ದಿನಾಲೂ ವ್ಯಾಯಾಮ ಮಾಡುತ್ತಿದ್ದೇನೆ ಎಂದು ತಿಳಿಸಿದ ವ್ಯಕ್ತಿ, ತಾನು ದಿನನಿತ್ಯ 1000 ಕಪಾಲ್ ಭಾತಿ (ಉಸಿರಾಟದ ವ್ಯಾಯಾಮ) ಮಾಡುತ್ತೇನೆ ಎಂದು ತಿಳಿಸಿದ್ದಾರೆ. ತಕ್ಷಣವೇ, ಸವಾಲು ಹಾಕಿದ ಮಮತಾ ಸಿಎಂ, ಸಾಧ್ಯವೇ ಇಲ್ಲ, ಹಾಗಾದೆ ಕಪಾಲ್ ಭಾತಿ ಮಾಡಿ ತೋರಿಸಿ, 1000 ಕಪಾಲ್ ಭಾತಿ ಮಾಡಿದರೆ ಇಲ್ಲಿಯೇ 10000 ರುಪಾಯಿ ಬಹುಮಾನ ನೀಡುತ್ತೇನೆ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ವ್ಯಕ್ತಿ, ತಾನು ಐದು ಗಂಟೆ ನಂತರವೇ ಕಪಾಲ್ ಭಾತಿ ಮಾಡುವುದಾಗಿ ಹೇಳಿದ್ದಾರೆ. ಈ ಸಂವಾದದ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಮಮತಾ ಬಾಡಿ ಶೇಮಿಂಗ್‌ ಮಾಡುತ್ತಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ಅದಾಗ್ಯೂ, ಕೆಲವರು ಮಮತಾ ಬೆಂಬಲಕ್ಕೆ ನಿಂತಿದ್ದು, ಮಮತಾ ಅವರು ತಾಯಿ ಹೃದಯದಿಂದ ಆರೋಗ್ಯದ ಕುರಿತು ಕಾಳಜಿ ವಹಿಸಿದ್ದಾರೆ, ಹೊರತು ಅವಮಾನ ಮಾಡುವ ಉದ್ದೇಶ ಇರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News