ಸಂಗೀತ ಕಾರ್ಯಕ್ರಮದ ಬಳಿಕ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಬಹುಭಾಷಾ ಗಾಯಕ ಕೆಕೆ

Update: 2022-06-01 06:32 GMT

ಕೋಲ್ಕತ್ತಾ: ದೇಶ ವಿದೇಶದಾದ್ಯಂತ ಸಂಗೀತ, ಸಿನಿ ಪ್ರೇಮಿಗಳ ನಡುವೆ ಕೆಕೆ ಎಂದೇ ಖ್ಯಾತರಾಗಿದ್ದ ಖ್ಯಾತ ಬಹುಭಾಷಾ ಗಾಯಕ ಕೃಷ್ಣಕುಮಾರ್ ಕುನ್ನತ್ ರವರು ಇಂದು ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮ ನಡೆಸಿದ ಬಳಿಕ ಅಸ್ವಸ್ಥಗೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಹೃದಯಾಘಾತಕ್ಕೊಳಗಾಗಿದ್ದೇ ಅವರ ನಿಧನಕ್ಕೆ ಕಾರಣ ಎಂದು ವರದಿಗಳು ತಿಳಿಸಿವೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. 

ಕೆಕೆ ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮವೊಂದನ್ನು ನಡೆಸಿದ ಬಳಿಕ ತೀವ್ರ ಅಸ್ವಸ್ಥಗೊಂಡು ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ರಾತ್ರಿ 10 ಗಂಟೆಯ ಬಳಿಕ ಅವರನ್ನು ಕೋಲ್ಕತ್ತದ ಸಿಎಂಆರ್‌ಐ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಅವರು ಮೃತಪಟ್ಟಿದ್ದಾಗಿ ಘೋಷಿಸಲಾಯಿತು ಎಂದು ಆಸ್ಪತ್ರೆಯ ಅಧಿಕೃತರು indiatoday ಗೆ ತಿಳಿಸಿದ್ದಾರೆ. 

ಕೋಲ್ಕತ್ತದ ನಝ್ರುಲ್‌ ಮಂಚಾದಲ್ಲಿ ನಡೆಯಲಿರುವ ಕಾರ್ಯಕ್ರಮದ ಕುರಿತು ಮಂಗಳವಾರ ಬೆಳಗ್ಗೆ ಕೆಕೆ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೊ ಹಂಚಿಕೊಂಡಿದ್ದರು. ಕೆ.ಕೆ ಪ್ರಖ್ಯಾತ ಮತ್ತು ಬಹುಮುಖ ಗಾಯಕರಾಗಿದ್ದು, ಹಿಂದಿ, ತಮಿಳು, ಕನ್ನಡ, ತೆಲುಗು, ಬೆಂಗಾಳಿ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಅವರು ಹಾಡಿದ್ದರು. ಕೆಕೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿತ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News