ಭಾರತದ 15 ಲಕ್ಷ ಟನ್ ಗೋಧಿ ತಿರಸ್ಕರಿಸಿದ ಟರ್ಕಿ: ವರದಿ
ಹೊಸದಿಲ್ಲಿ: ಭಾರತದಿಂದ ಆಗಮಿಸಿದ್ದ 15 ಲಕ್ಷ ಟನ್ ಗೋಧಿಯನ್ನು 'ಸಸ್ಯ ನೈರ್ಮಲ್ಯ' ಆತಂಕದ ಕಾರಣ ನೀಡಿ ಟರ್ಕಿ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಈ ಕಾರಣದಿಂದ ಮೇ 29ರಂದು 15 ಲಕ್ಷ ಟನ್ ಗೋಧಿ ಹೊತ್ತಿದ್ದ ಹಡಗು ಭಾರತಕ್ಕೆ ವಾಪಸ್ಸಾಗಿದೆ ಎಂದು ವ್ಯಾಪಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಎಸ್ ಆ್ಯಂಡ್ ಪಿ ಗ್ಲೋಬಲ್ ಕಮೊಡಿಟಿ ಇನ್‍ಸೈಟ್ಸ್ ವರದಿ ಮಾಡಿದೆ.
ಈ ಬೆಳವಣಿಗೆಯಿಂದಾಗಿ ಭಾರತದಿಂದ ರಫ್ತು ಮಾಡಲು ಉದ್ದೇಶಿಸಿದ್ದ 15 ಲಕ್ಷ ಟನ್ ಗೋಧಿಯ ಬಗ್ಗೆ ಭಾರತೀಯ ವ್ಯಾಪಾರಿಗಳ ಆತಂಕಕ್ಕೆ ಕಾರಣವಾಗಿದೆ.
56,877 ಟನ್ ಗೋಧಿ ಹೊತ್ತಿದ್ದ ಹಡಗು ಇದೀಗ ಟರ್ಕಿಯಿಂದ ಕಾಂಡ್ಲಾ ಬಂದರಿಗೆ ವಾಪಸ್ಸಾಗುತ್ತಿದೆ ಎಂದು ವರದಿ ವಿವರಿಸಿದೆ.
"ಈ ಗೋಧಿಯಲ್ಲಿ ಇಂಡಿಯನ್ ರುಬೆಲ್ಲಾ ರೋಗ ಪತ್ತೆಯಾಗಿದ್ದು, ಈ ಕಾರಣದಿಂದ ಟರ್ಕಿಯ ಕೃಷಿ ಮತ್ತು ಅರಣ್ಯ ಸಚಿವಾಲಯ ಇದನ್ನು ತಿರಸ್ಕರಿಸಿದೆ ಎನ್ನಲಾಗಿದೆ. ಈ ಬಗೆಗೆ ಅಭಿಪ್ರಾಯ ಕೇಳಿದಾಗ ಭಾರತದ ವಾಣಿಜ್ಯ ಮತ್ತು ಕೃಷಿ ಸಚಿವಾಲಯಗಳು ಉತ್ತರಿಸಲು ನಿರಾಕರಿಸಿವೆ ಎಂದು hindustantimes ವರದಿ ಮಾಡಿದೆ.
ಖಾಸಗಿ ಗೋಧಿ ರಫ್ತನ್ನು ಭಾರತ ನಿಷೇಧಿಸುವ ಮುನ್ನ ಈ ಗೋಧಿಯನ್ನು ಕಳುಹಿಸಲಾಗಿತ್ತು. ಭಾರತದ ಮೂರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಗ್ರಾಹಕ ಹಣದುಬ್ಬರ ಎಂಟು ವರ್ಷಗಳಲ್ಲೇ ಗರಿಷ್ಠ ಮಟ್ಟವಾದ ಶೇಕಡ 7.79ನ್ನು ತಲುಪಿದೆ. ಆಹಾರ ಹಣದುಬ್ಬರ ಶೇಕಡ 8.38ನ್ನು ತಲುಪಿದೆ. ಗೋಧಿಯಂಥ ಹೇರಳವಾಗಿ ದಾಸ್ತಾನು ಇರುವ ಧಾನ್ಯಗಳ ಬೆಲೆ ಕೂಡಾ ಶೇಕಡ 8.38ರಷ್ಟು ಹೆಚ್ಚಿದೆ.