ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಬೃಜೇಶ್ ಕಾಳಪ್ಪ

Update: 2022-06-01 04:06 GMT
ಬೃಜೇಶ್ ಕಾಳಪ್ಪ (Photo-Facebook)

ಹೊಸದಿಲ್ಲಿ: ಹಿರಿಯ ಸುಪ್ರೀಂಕೋರ್ಟ್ ವಕೀಲ ಕಪಿಲ್ ಸಿಬಾಲ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮತ್ತೊಬ್ಬ ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಬೃಜೇಶ್ ಕಾಳಪ್ಪ ಕೂಡಾ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

"ಪಕ್ಷದ ಬಗ್ಗೆ ಚೈತನ್ಯ ಹಾಗೂ ಉತ್ಸಾಹ" ಇಲ್ಲ ಎಂಬ ಕಾರಣ ನೀಡಿ ಅವರು ರಾಜೀನಾಮೆ ನೀಡಿದ್ದಾರೆ.

"ನನಗೆ ಹಲವು ಅವಕಾಶಗಳನ್ನು ನೀಡಿದ್ದಕ್ಕಾಗಿ ನಾನು ಹೃತ್ಪೂರ್ವಕ ಧನ್ಯವಾದ ಹೇಳುತ್ತಿದ್ದೇನೆ. ಈ ದೊಡ್ಡ ದೇಶದ ಎಲ್ಲ ಕಡೆಗಳಲ್ಲಿ ನನ್ನ ಮುಖ ಪರಿಚಿತವಾಗಿದ್ದರೆ ಅದಕ್ಕೆ ನಿಮ್ಮ ಪೋಷಣೆ ಕಾರಣ. ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರರಾಗಿ ಸಚಿವರ ಸ್ಥಾನಮಾನ ನೀಡಿ ನೇಮಕ ಮಾಡಿದ್ದ ನಿಮ್ಮ ಆಶೀರ್ವಾದಕ್ಕೆ ಮತ್ತೊಮ್ಮೆ ಧನ್ಯವಾದಗಳು" ಎಂದು ಕಾಳಪ್ಪ ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

"ಸುಮಾರು ಒಂದು ದಶಕದಿಂದ ಹಿಂದಿ, ಇಂಗ್ಲಿಷ್ ಹಾಗೂ ಕನ್ನಡ ಚಾನಲ್‍ಗಳಲ್ಲಿ ನಾನು ಪಕ್ಷವನ್ನು ಪ್ರತಿನಿಧಿಸುತ್ತಿದ್ದೆ. 2013ರಿಂದ ಇದುವರೆಗೆ 6497 ಚರ್ಚೆಗಳಲ್ಲಿ ಭಾಗವಹಿಸಿದ್ದೇನೆ. ಪಕ್ಷ ನನಗೆ ನಿರಂತರವಾಗಿ ವಹಿಸುತ್ತಿದ್ದ ಕೆಲಸಗಳನ್ನು ನನಗೆ ಆತ್ಮತೃಪ್ತಿಯಾಗುವಂತೆ ನಿರ್ವಹಿಸಿದ್ದೇನೆ. ಟಿವಿ ಚರ್ಚೆಗಳ ವಿಚಾರದಲ್ಲಿ, ನಾನು ಯಾವುದೇ ಚರ್ಚೆಗೆ ಪೂರ್ವಸಿದ್ಧತೆ ಇಲ್ಲದೇ ತೆರಳಿಲ್ಲ. 2014 ಹಾಗೂ 2019ರ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದ ಸಂದರ್ಭದಲ್ಲಿ ಕೂಡಾ ನನ್ನಲ್ಲಿ ಚೈತನ್ಯ ಹಾಗೂ ಉತ್ಸಾಹ ಕುಂದಿರಲಿಲ್ಲ" ಎಂದು ವಿವರಿಸಿದ್ದಾರೆ.

"ಆದರೆ ಇತ್ತೀಚಿನ ದಿನಗಳಲ್ಲಿ ನನ್ನಲ್ಲಿ ಆ ಪ್ರೀತಿ, ದಕ್ಷತೆ ಹಾಗೂ ಪರಿಪೂರ್ಣತೆ ಕಾಣುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ 1997ರಿಂದ ಆರಂಭವಾದ ಸಹಯೋಗ ಕೊನೆಗೊಳಿಸಿ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದು ಬಿಟ್ಟು ಅನ್ಯ ಮಾರ್ಗ ತೋಚುತ್ತಿಲ್ಲ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News