×
Ad

ಯುಪಿಎಸ್ಸಿ ಕೊನೆಯ ಅವಕಾಶವೂ ತಪ್ಪಿದ ಬಳಿಕ ಈ ಯುವಕ ಮಾಡಿದ ಟ್ವೀಟ್ ಏನು ಗೊತ್ತೇ ?

Update: 2022-06-01 08:48 IST

ಹೊಸದಿಲ್ಲಿ: ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿರುವ ನಡುವೆಯೇ, ಅಂತಿಮ ಪ್ರಯತ್ನದಲ್ಲೂ ಕೂದಲೆಳೆ ಅಂತರದಿಂದ ವಿಫಲನಾದ ಯುವಕನೊಬ್ಬ, "ಹತ್ತು ವರ್ಷಗಳ ಕಠಿಣ ಪರಿಶ್ರಮ ಭಸ್ಮವಾಯಿತು" ಎಂದು ಉದ್ಗರಿಸಿದ್ದು, ಆದರೆ ಇದರಿಂದ ಧೃತಿಗೆಡದೇ, "ಇನ್ನೂ ನಾನು ಮೇಲೇಳುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಚಂಡೀಗಢದ ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ರಜತ್ ಸಂಬ್ಯಾಲ್, "ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲೊಂದಾದ ಯುಪಿಎಸ್ಸಿ ಪರೀಕ್ಷೆಯನ್ನು ಉತ್ತೀರ್ಣನಾಗಲು ಆರನೇ ಹಾಗೂ ಕೊನೆಯ ಪ್ರಯತ್ನ ಮಾಡಿದ್ದೆ" ಎಂದು ಹೇಳಿದ್ದು, ಹಿಂದಿನ ಪ್ರಯತ್ನಗಳಲ್ಲಿ ಅಂತಿಮ ಸುತ್ತು ತಲುಪಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕೊನೆಯ ಸುತ್ತು ತಲುಪಿದ ಹಿನ್ನೆಲೆಯಲ್ಲಿ ಜಯಶಾಲಿಯಾಗುವ ಕನಸು ಕಂಡಿದ್ದರು.

"ಹತ್ತು ವರ್ಷಗಳ ಕಠಿಣ ಪರಿಶ್ರಮ ಬೂದಿಯಾಯಿತು. ಆರು ಯುಪಿಎಸ್ಸಿ ಪ್ರಯತ್ನಗಳು ಮುಗಿದವು. ಮೂರು ಬಾರಿ ಪ್ರಿಲಿಂಪ್ಸ್ ಅನುತ್ತೀರ್ಣನಾದೆ. ಎರಡು ಬಾರಿ ಮೈನ್ಸ್ ನಲ್ಲಿ ವಿಫಲನಾದೆ. ಕೊನೆಯ ಪ್ರಯತ್ನದಲ್ಲಿ ನಿನ್ನೆ ಸಂದರ್ಶನದಲ್ಲಿ ಕಡಿಮೆ ಅಂಕ ಬಂದ ಹಿನ್ನೆಲೆಯಲ್ಲಿ ಮುಗ್ಗರಿಸಿದೆ. 11 ಅಂಕಗಳಿಂದ ಅವಕಾಶ ತಪ್ಪಿಸಿಕೊಂಡೆ" ಎಂದು ಸಂಬ್ಯಾಲ್ ಟ್ವೀಟ್ ಮಾಡಿದ್ದಾರೆ. ಜಮ್ಮು ಕಾಶ್ಮೀರದ ಸಂಬಾ ಜಿಲ್ಲೆಯಲ್ಲಿ ಹುಟ್ಟಿದ ಇವರು ಜಮ್ಮುವಿನಲ್ಲಿ ಬೆಳೆದಿದ್ದರು.

ಟ್ವೀಟ್ ಜತೆಗೆ ಸಂಬ್ಯಾಲ್ ತಮ್ಮ ಅಂಕಪಟ್ಟಿ ಹಾಗೂ ಯುಪಿಎಸ್ಸಿ ಕಚೇರಿ ಮುಂದೆ ತೆಗೆಸಿಕೊಂಡ ಫೋಟೊ ಶೇರ್ ಮಾಡಿದ್ದಾರೆ. ಅಂಕಪಟ್ಟಿಯ ಪ್ರಕಾರ ರಜತ್ 942 ಅಂಕ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲವು ಬಳಕೆದಾರರು ಎಂಜಿನಿಯರ್ ಆಗಿ ಉತ್ತಮ ಸಾಧನೆ ಮಾಡಬಹುದು ಎಂದು ಹುರಿದುಂಬಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News