ಅಕ್ರಮ ಹಣ ವರ್ಗಾವಣೆ ಪ್ರಕರಣ: ಸೋನಿಯಾ, ರಾಹುಲ್‌ ಗಾಂಧಿಗೆ ಇಡಿಯಿಂದ ಸಮನ್ಸ್‌

Update: 2022-06-01 15:09 GMT

ಹೊಸದಿಲ್ಲಿ, ಜೂ. 1: ‘ನ್ಯಾಶನಲ್ ಹೆರಾಲ್ಡ್’ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಅನುಷ್ಠಾನ ನಿರ್ದೇಶನಾಲಯ (ಇಡಿ)ವು ಬುಧವಾರ ಕಾಂಗ್ರೆಸ್ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಗ ಹಾಗೂ ಸಂಸದ ರಾಹುಲ್ ಗಾಂಧಿಗೆ ಸಮನ್ಸ್ ಜಾರಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜೂನ್ 8ರಂದು ವಿಚಾರಣೆಗೆ ಹಾಜರಾಗುವಂತೆ ಸೋನಿಯಾ ಗಾಂಧಿಗೆ ಸೂಚಿಸಲಾಗಿದೆ ಹಾಗೂ ಅದಕ್ಕಿಂತಲೂ ಮುಂಚೆಯೇ ಹಾಜರಾಗುವಂತೆ ರಾಹುಲ್ ಗಾಂಧಿಗೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ.ಸೂಚನೆಯಂತೆ ಸೋನಿಯಾ ಗಾಂಧಿ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಭಿಶೇಕ್ ಮನು ಸಿಂಘ್ವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘‘ರಾಹುಲ್ ಗಾಂಧಿ ಇಲ್ಲಿದ್ದರೆ ಹಾಜರಾಗುತ್ತಾರೆ, ಇಲ್ಲದಿದ್ದರೆ ವಿಚಾರಣೆಗೆ ಹಾಜರಾಗಲು ಅವರು ಹೊಸ ದಿನಾಂಕಕ್ಕಾಗಿ ಮನವಿ ಮಾಡಲಿದ್ದಾರೆ’’ ಎಂದು ಸಿಂಘ್ವಿ ತಿಳಿಸಿದರು.ಕಾಂಗ್ರೆಸ್ ಪಕ್ಷ ಪ್ರಾಯೋಜಿತ ಯಂಗ್ ಇಂಡಿಯನ್, ‘ನ್ಯಾಶನಲ್ ಹೆರಾಲ್ಡ್’ ಪತ್ರಿಕೆಯ ಮಾಲೀಕನಾಗಿದೆ ಹಾಗೂ ಪತ್ರಿಕೆಯನ್ನು ಅಸೋಸಿಯೇಟಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಪ್ರಕಟಿಸುತ್ತಿದೆ. ಯಂಗ್ ಇಂಡಿಯನ್ನಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವುದಕ್ಕಾಗಿ ಅನುಷ್ಠಾನ ನಿರ್ದೇಶನಾಲಯವು ಇತ್ತೀಚೆಗೆ ಮೊಕದ್ದಮೆ ದಾಖಲಿಸಿತ್ತು.ಅಕ್ರಮ ಹಣ ವರ್ಗಾವಣೆ ತಡೆ (ಪಿಎಮ್ಎಲ್ಎ)ಯ ಕ್ರಿಮಿನಲ್ ಪರಿಚ್ಛೇದಗಳನ್ವಯ ಸೋನಿಯಾ ಮತ್ತು ರಾಹುಲ್ ಗಾಂಧಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಅನುಷ್ಠಾನ ನಿರ್ದೇಶನಾಲಯವು ಬಯಸಿದೆ ಎಂದು ಅಧಿಕಾರಿಗಳು ತಿಳಿಸಿದರು.ಇತ್ತೀಚೆಗೆ ಅನುಷ್ಠಾನ ನಿರ್ದೇಶನಾಲಯವು ತನಿಖೆಯ ಭಾಗವಾಗಿ ಹಿರಿಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್ ಬನ್ಸಾಲ್ ರನ್ನು ಪ್ರಶ್ನಿಸಿದೆ.

ಶೇರುಗಳ ಒಡೆತನ, ಹಣಕಾಸು ವ್ಯವಹಾರಗಳು ಹಾಗೂ ಯಂಗ್ ಇಂಡಿಯನ್ ಮತ್ತು ಎಜೆಎಲ್ನ ಪ್ರಾಯೋಜಕರ ಪಾತ್ರಗಳ ಬಗ್ಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಅನುಷ್ಠಾನ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯ ಭಾಗವಾಗಿ ಹಿರಿಯ ಕಾಂಗ್ರೆಸ್ ನಾಯಕರು ಮತ್ತು ಗಾಂಧಿಗಳನ್ನು ಪ್ರಶ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ 2013ರಲ್ಲಿ ಖಾಸಗಿ ಕ್ರಿಮಿನಲ್ ದೂರು ದಾಖಲಿಸಿದ್ದರು. ಅದರ ಆಧಾರದಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ತನಿಖೆಯನ್ನು ಸ್ಥಳೀಯ ನ್ಯಾಯಾಲಯವೊಂದು ಗಣನಗೆ ತೆಗೆದುಕೊಂಡ ಬಳಿಕ ಅನುಷ್ಠಾನ ನಿರ್ದೇಶನಾಲಯವು ಇತ್ತೀಚೆಗೆ ಪಿಎಮ್ಎಲ್ಎಯ ಕ್ರಿಮಿನಲ್ ವಿಧಿಗಳಡಿ ಹೊಸ ಮೊಕದ್ದಮೆಯೊಂದನ್ನು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News