ಕಾರ್ಕಳಕ್ಕೆ ಶಿಲ್ಪಕಲಾ ಕ್ಲಸ್ಟರ್, ಮಂಗಳೂರಿಗೆ ಫರ್ನಿಚರ್ ಕ್ಲಸ್ಟರ್ : ಸಿಎಂ ಬೊಮ್ಮಾಯಿ

Update: 2022-06-01 09:55 GMT

ಕಾರ್ಕಳ: ಕಾರ್ಕಳ ಶಿಲ್ಪಕಲೆ, ಕೆತ್ತನೆ ಹಾಗೂ ಕುಸುರಿ ಕೆಲಸದಿಂದ ಜಗತ್ಪ್ರಸಿದ್ಧವಾಗಿದೆ.  ಕಾರ್ಕಳದ ಕಲ್ಲು ಮತ್ತು ಮರದ ಶಿಲ್ಪಕಲೆ ಹಾಗೂ ಕಾರ್ಮಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಶಿಲ್ಪಕಲಾ ಕ್ಲಸ್ಟರ್ ಸ್ಥಾಪಿಸುವ ಹಾಗೂ ಮಂಗಳೂರು ಬಳಿ ಬೃಹತ್ ಫರ್ನಿಚರ್ ಕ್ಲಸ್ಟರನ್ನು ಉದ್ಯಮಿಗಳ ಸಹಯೋಗದೊಂದಿಗೆ ಇದೇ ವರ್ಷದಿಂದ ಪ್ರಾರಂಭಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಘೋಷಿಸಿದರು.

ಅವರು ಕಾರ್ಕಳ ತಾಲೂಕಿನ  ನದಿಗೆ 108 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಏತ ನೀರಾವರಿ ಯೋಜನೆಯನ್ನು ನದಿಗೆ ಬಾಗಿನ ಅರ್ಪಿಸಿ , ಆರತಿ ಎತ್ತಿ , ಸ್ವಿಚ್ ಒತ್ತಿ ಚಾಲನೆ ನೀಡಿದ ನಂತರ ರಾಧ ನಾಯಕ್ ಹೈಸ್ಕೂಲಿನಲ್ಲಿ ನಡೆದ ಸಮಾರಂಭದಲ್ಲಿ ಹೇಳಿದರು.

ಎಣ್ಣಿಹೊಳೆ ಏತ ನೀರಾವರಿ ಯೋಜನೆಯ ತಡೆಗೋಡೆ ನಿರ್ಮಾಣಕ್ಕೆ ಸಚಿವ ಸುನೀಲ್ ಕುಮಾರ್ ಅವರ ಬೇಡಿಕೆಯ ಮೇರೆಗೆ ಹೆಚ್ಚುವರಿ 40 ಕೋಟಿ ರೂಪಾಯಿ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಕರಾವಳಿ ಭಾಗದಲ್ಲಿ ಹಸಿರು ಇಂಧನ ತಯಾರಿಕೆಯ ಕೈಗಾರಿಕಾ ಹಬ್ ನಿರ್ಮಾಣದ ಇಂಗಿತವನ್ನು ವ್ಯಕ್ತಪಡಿಸಿದರು.

ರಾಜ್ಯದ ಕರಾವಳಿ ಜಿಲ್ಲೆಗಳನ್ನು ಅತ್ಯಂತ ಆಧುನಿಕ ಅಭಿವೃದ್ಧಿ ಜಿಲ್ಲೆಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರವಾರ ಮಂಗಳೂರು ಬಂದರು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬಂದರು ಅಭಿವೃದ್ಧಿಗಾಗಿ ಹೆಚ್ಚಿನ ಭೂಮಿಯನ್ನು ನೀಡಲಾಗಿದೆ. ಇದರಿಂದಾಗಿ ಕರಾವಳಿ ಜೊತೆಗೆ ಇತರ ಪ್ರದೇಶದ ಮೇಲೆ ಪೂರಕ ಪರಿಣಾಮ ಬೀರುತ್ತದೆ. ಹೆಚ್ಚು ಉದ್ಯೋಗ ಸ್ರಷ್ಟಿಯಾಗುತ್ತದೆ ಇತರ 8 ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದೆ. ಹೈಸ್ಪಿಡ್ ಬೋಟುಗಳ ಬಳಕೆಗೆ ಆದ್ಯತೆ ನೀಡಲಾಗುತ್ತದೆ ಎಂದರು. 

ಈ ಭಾಗದಲ್ಲಿ ಟ್ಯೂರಿಸಂಗೆ ಹೆಚ್ಚಿನ ಅವಕಾಶವಿರುವುದರಿಂದ ಟ್ಯೂರಿಸಂ ಸರ್ಕ್ಯೂಟ್, ಬೀಚ್  ಟ್ಯೂರಿಸಂ , ಬುಲೆಟ್ ಟ್ರೈನ್ ಟ್ಯೂರಿಸಂ ನಡೆಸುವ ಮೂಲಕ ಅಭಿವೃದ್ಧಿ ಹಾಗೂ ಉದ್ಯೋಗ ಅವಕಾಶವನ್ನು ಹೆಚ್ಚಿಸಬಹುದಾಗಿದೆ ಎಂದರು

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಚಿವರು ಹಾಗೂ ಶಾಸಕರ ಕಾರ್ಯವೈಖರಿ ಬಗ್ಗೆ ಹರ್ಷ ವ್ಯಕ್ತಪಡಿಸಿದ ಅವರು ಸುನೀಲ್ ಕುಮಾರ್ ಗೆ ನಿಮ್ಮ ಮೇಲಿನ ಕಳಕಳಿ, ನಮ್ಮ ಸ್ನೇಹದ ಶಕ್ತಿ ಅಭಿವೃದ್ಧಿಗೆ ಪೂರಕವಾಗಿದೆ ಜನಪ್ರತಿನಿಧಿಗಳು ಜನರಿಗೆ ಉಪಯೋಗವಾಗಬೇಕು ಅಂತಹ ವ್ಯಕ್ತಿ ಸಿಕ್ಕಿರುವುದು ನಿಮ್ಮ ಪುಣ್ಯ ಎಂದರು.

ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರವಾಗಿರುವುದರಿಂದ ಸುಮಾರು ‌643000 ಎಕ್ರೆ ಭೂಮಿಯಲ್ಲಿ ತಲೆಮಾರುಗಳಿಂದ ಹಕ್ಕು ಪತ್ರ ಸಿಗದ ಬಡ ಕುಟುಂಬ ಹಾಗೂ ಕೃಷಿ ಕುಟುಂಬಕ್ಕೆ ಲಾಭವಾಗಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News