×
Ad

ರಾಜ್ಯಸಭೆ ಚುನಾವಣೆ: ಹೋಟೆಲ್ ಸೇರಿದ ರಾಜಸ್ಥಾನ ಕಾಂಗ್ರೆಸ್ ಶಾಸಕರು

Update: 2022-06-02 07:20 IST
ಸಾಂದರ್ಭಿಕ ಚಿತ್ರ

ಜೈಪುರ: ಈ ತಿಂಗಳ 10ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಶಾಸಕರನ್ನು ಐಷಾರಾಮಿ ಹೋಟೆಲ್‍ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಮೇ ಮಧ್ಯದಲ್ಲಿ ನಡೆದ ಅಖಿಲ ಭಾರತ ಚಿಂತನ ಶಿಬಿರ ನಡೆದ ಹೋಟೆಲ್‍ಗೆ ಶಾಸಕರನ್ನು ಕರೆದೊಯ್ಯಲಾಗುತ್ತದೆ.

"ಪಕ್ಷದ ಎಲ್ಲ ಶಾಸಕರು ಉದಯಪುರಕ್ಕೆ ಆಗಮಿಸುವಂತೆ ಸೂಚಿಸಲಾಗಿದೆ. ಕೆಲವರು ಇಂದೇ ಪ್ರಯಾಣ ಬೆಳೆಸಲಿದ್ದು, ಮತ್ತೆ ಕೆಲವರು ನಾಳೆ ಆಗಮಿಸಲಿದ್ದಾರೆ" ಎಂದು ರಾಜ್ಯ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಕಾಂಗ್ರೆಸ್ ಶಾಸಕರ ಜತೆಗೆ ರಾಜ್ಯ ಸರ್ಕಾರವನ್ನು ಬೆಂಬಲಿಸುತ್ತಿರುವ ಇತರ ಪಕ್ಷಗಳು ಮತ್ತು ಪಕ್ಷೇತರ ಶಾಸಕರನ್ನೂ ಉದಯಪುರಕ್ಕೆ ಸ್ಥಳಾಂತರಿಸಲಾಗುತ್ತದ ಎಂದು ಮೂಲಗಳು ಹೇಳಿವೆ.

ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಧ್ಯಮ ದಿಗ್ಗಜ ಸುಭಾಷ್‍ಚಂದ್ರ ಉಮೇದುವಾರಿಕೆಯನ್ನು ಬಿಜೆಪಿ ಬೆಂಬಲಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಂಜಾಗ್ರತಾ ಕ್ರಮವಾಗಿ ತನ್ನ ಶಾಸಕರನ್ನು ಭದ್ರಪಡಿಸಿಕೊಂಡಿದೆ.

ಕಾಂಗ್ರೆಸ್ ನಿಂದ ಮುಕುಲ್ ವಾಸ್ನಿಕ್, ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಪ್ರಮೋದ್ ತಿವಾರಿ ಕಣದಲ್ಲಿದ್ದು, ರಾಜ್ಯದಿಂದ ಒಟ್ಟು ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ಮಾಜಿ ಸಚಿವ ಘನಶ್ಯಾಮ್ ತಿವಾರಿ ಸ್ಪರ್ಧಿಸಿದ್ದಾರೆ. ಝೀ ಟಿವಿ ಸಂಸ್ಥಾಪಕ ಸುಭಾಷ್ ಚಂದ್ರ ಪ್ರಸ್ತುತ ಹರ್ಯಾಣದಿಂದ ಮೇಲ್ಮನೆ ಸದಸ್ಯರಾಗಿದ್ದು, ಅವರ ಅಧಿಕಾರಾವಧಿ ಆಗಸ್ಟ್ 1ಕ್ಕೆ ಮುಕ್ತಾಯವಾಗಲಿದೆ.

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ 108 ಶಾಸಕರನ್ನು ಹೊಂದಿದ್ದು, ನಾಲ್ಕು ಸ್ಥಾನಗಳ ಪೈಕಿ ಎರಡನ್ನು ಖಚಿತವಾಗಿ ಗೆಲ್ಲಬಹುದು. ಬಿಜೆಪಿ ಒಂದು ಸ್ಥಾನ ಗೆಲ್ಲಬಹುದಾಗಿದೆ. ಕಾಂಗ್ರೆಸ್ ಬಳಿ 26 ಹೆಚ್ಚುವರಿ ಮತಗಳಿದ್ದು, ಮೂರನೇ ಸ್ಥಾನ ಗೆಲ್ಲಲು ಅಗತ್ಯವಿರುವ 41 ಮತಗಳಿಗೆ 15 ಮತಗಳ ಕೊರತೆ ಇದೆ. 71 ಶಾಸಕರನ್ನು ಹೊಂದಿರುವ ಬಿಜೆಪಿ ಬಳಿ 30 ಹೆಚ್ಚುವರಿ ಮತಗಳಿವೆ. ನಾಲ್ಕನೇ ಸ್ಥಾನಕ್ಕಾಗಿ ಈ ಎರಡು ಪಕ್ಷಗಳ ಹೆಚ್ಚುವರಿ ಮತವನ್ನು ಸೆಳೆಯಲು ಕಸರತ್ತು ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News