×
Ad

ದೋಷಯುಕ್ತ ವರದಿ ನೀಡಿದ ಅಲ್ಟ್ರಾಸೌಂಡ್ ಲ್ಯಾಬ್‍ಗೆ ರೂ. 1.25 ಕೋಟಿ ದಂಡ

Update: 2022-06-02 07:27 IST
ಸಾಂದರ್ಭಿಕ ಚಿತ್ರ( credit: courtexpress.in)

ಹೊಸದಿಲ್ಲಿ: ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣವೊಂದರಲ್ಲಿ ರಾಷ್ಟ್ರೀಯ ಗ್ರಾಹಕ ಆಯೋಗ (ಎನ್‍ಸಿಆರ್‍ಡಿಸಿ), ತಪ್ಪು ವರದಿ ನೀಡಿದ ನಾಗ್ಪುರದ ಅಲ್ಟ್ರಾಸೌಂಡ್ ಲ್ಯಾಬ್ ಒಂದಕ್ಕೆ 1.25 ಕೋಟಿ ರೂಪಾಯಿಗಳ ದಂಡ ವಿಧಿಸುವ ಐತಿಹಾಸಿಕ ಆದೇಶ ನೀಡಿದೆ. ದಿವ್ಯಾಂಗ ಮಗು ಹಾಗೂ ಆತನ ಪೋಷಕರಿಗೆ 1.2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಮಹಿಳೆ ಗರ್ಭಿಣಿಯಾಗಿದ್ದಾಗ ನಡೆಸಿದ ನಾಲ್ಕು ಅಲ್ಟ್ರಾಸೌಂಡ್ ಪರೀಕ್ಷೆಯ ಬಗ್ಗೆ ತಪ್ಪು ವರದಿ ನೀಡಿದ್ದಕ್ಕಾಗಿ ಪ್ರಯೋಗಾಲಯವನ್ನು ಹೊಣೆ ಮಾಡಲಾಗಿದೆ. ನಿರ್ಲಕ್ಷ್ಯದ ಪರಿಣಾಮವಾಗಿ ಜನ್ಮಜಾತ ದೋಷವುಳ್ಳ ಮಗು ಹುಟ್ಟಿತ್ತು.

ಜನ್ಮಜಾತ ಅಸ್ವಸ್ಥತೆ ಎಂದರೆ ರಚನಿಕ ಮತ್ತು ಕಾರ್ಯವಿಧಾನದ ವ್ಯತ್ಯಯಗಳಾಗಿದ್ದು, ಮಗು ಗರ್ಭಾವಸ್ಥೆಯ ಹಂತದಲ್ಲಿದ್ದಾಗ ಸಂಭವಿಸುತ್ತದೆ. ಆರಂಭಿಕ ಹಂತದಲ್ಲಿ ಇದ್ದ ದೋಷವನ್ನು ಪತ್ತೆ ಮಾಡಲು ಪ್ರಯೋಗಾಲಯ ವಿಫಲವಾಗಿರುವುದನ್ನು ಹಾಗೂ ಗರ್ಭಪಾತಕ್ಕೆ ಪ್ರಯೋಗಾಲಯ ಶಿಫಾರಸ್ಸು ಮಾಡದಿರುವುದನ್ನು ಆಯೋಗ ಉಲ್ಲೇಖಿಸಿದೆ. ನವಜಾತ ಶಿಶುವಿನ ಬೆರಳುಗಳು, ಬಲಗಾಲಿನ ಮೊಣಕಾಲ ಕೆಳಗೆ ಹಾಗೂ ಎಡ ಪಾದದಲ್ಲಿ ದೋಷಗಳು ಕಂಡುಬಂದಿದ್ದವು.

ಇಮೇಜಿಂಗ್ ಪಾಯಿಂಟ್ ಹೆಸರಿನ ಕ್ಲಿನಿಕ್ ಅನ್ನು ರೇಡಿಯಾಲಜಿ ತಜ್ಞ ಡಾ.ದಿಲೀಪ್ ಘಿಕೆ ನಿರ್ವಹಿಸುತ್ತಿದ್ದರು. ಭ್ರೂಣದ 17-18ನೇ ವಾರದಲ್ಲಿ ದೋಷವನ್ನು ಪತ್ತೆ ಮಾಡಲು ವಿಫಲರಾದ ಅವರನ್ನು ಹಾಗೂ ಕ್ಲಿನಿಕ್ ಅನ್ನು ಹೊಣೆ ಮಾಡಿರುವ ಆಯೋಗ, ಮಗುವಿನ ಕಲ್ಯಾಣಕ್ಕೆ, ಭವಿಷ್ಯದ ವೆಚ್ಚಗಳಿಗೆ, ಚಿಕಿತ್ಸೆಗೆ ಹಾಗೂ ಕೃತಕ ಕಾಲು ಖರೀದಿಗೆ ಪರಿಹಾರವನ್ನು ನೀಡುವಂತೆ ಆದೇಶಿಸಿದೆ. ನ್ಯಾಯಮೂರ್ತಿ ಆರ್.ಕೆ.ಅಗರ್‍ವಾಲ್ ಮತ್ತು ಎಸ್.ಎಂ.ಕಾಂತಿಕರ್ ಅವರನ್ನು ಒಳಗೊಂಡ ಎನ್‍ಸಿಡಿಆರ್‍ಸಿ ಈ ಐತಿಹಾಸಿಕ ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News