ಹರ್ಯಾಣ: ಶೌಚಗುಂಡಿಯಲ್ಲಿ ಉಸಿರುಗಟ್ಟಿ 8 ವರ್ಷದ ಬಾಲಕ ಸೇರಿದಂತೆ ಮೂವರು ಮೃತ್ಯು
ನುಹ್(ಹರ್ಯಾಣ): ಹರ್ಯಾಣದ ನುಹ್ ಜಿಲ್ಲೆಯಲ್ಲಿ ಎಂಟು ವರ್ಷದ ಬಾಲಕ ಸೇರಿದಂತೆ ಮೂವರು ಶೌಚಗುಂಡಿಯೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಜಿಲ್ಲೆಯ ಬಿಚೋರ್ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಎಂಟು ವರ್ಷದ ಬಾಲಕನು ಗುಂಡಿಯ ಬಳಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಅದರೊಳಗೆ ಬಿದ್ದ. ಆಗ ಹುಡುಗನ ತಂದೆ ಹಾಗೂ ಇನ್ನೊಬ್ಬ ವ್ಯಕ್ತಿ ಬಾಲಕನನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಘಟನೆಯಲ್ಲಿ ಮೂವರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮದ ನಿವಾಸಿ ದಿನು ಎಂಬುವವರ ಮನೆಯ ಹೊರಗೆ 20 ಅಡಿ ಆಳದ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲಾಗಿತ್ತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗುಂಡಿಯನ್ನು ಕಲ್ಲಿನ ಚಪ್ಪಡಿಯಿಂದ ಮುಚ್ಚಲಾಗಿತ್ತು. ಮಂಗಳವಾರ ದಿನು ಅವರ ಎಂಟು ವರ್ಷದ ಮೊಮ್ಮಗ ಆರಿಜ್ ಆ ತೊಟ್ಟಿಯ ಬಳಿ ಆಟವಾಡುತ್ತಿದ್ದಾಗ ಗುಂಡಿಯೊಳಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನ ತಂದೆ ಸಿರಾಜು( 30) ಮತ್ತು ಆತನ ಚಿಕ್ಕಪ್ಪ ಸಲಾಮು(35) ಬಾಲಕನನ್ನು ರಕ್ಷಿಸುವ ಪ್ರಯತ್ನದಲ್ಲಿ ಟ್ಯಾಂಕ್‌ಗೆ ಇಳಿದಿದ್ದಾರೆ.
ಯಾರೂ ಹೊರಗೆ ಬರದಿದ್ದಾಗ ಕುಟುಂಬಸ್ಥರು ಬೊಬ್ಬಿಡಲಾರಂಭಿಸಿದ್ದಾರೆ.. ಮೂವರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಘಟನೆ ಕುರಿತು ಕುಟುಂಬಸ್ಥರು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ.