ತಾಲಿಬಾನಿ ಆಡಳಿತದ ಅಫ್ಘಾನಿಸ್ತಾನಕ್ಕೆ ಮೊದಲ ಬಾರಿ ತೆರಳಲಿರುವ ಭಾರತದ ರಾಜತಾಂತ್ರಿಕ ನಿಯೋಗ

Update: 2022-06-02 16:31 GMT

ಹೊಸದಿಲ್ಲಿ, ಜೂ.2: ಅಫ್ಘಾನಿಸ್ತಾನ ತಾಲಿಬಾನ್‌ನ ವಶಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಭಾರತದ ಉನ್ನತ ರಾಜತಾಂತ್ರಿಕರು ಆ ದೇಶಕ್ಕೆ ಭೇಟಿ ನೀಡಿ ಯುದ್ಧದಿಂದ ಜರ್ಝರಿತಗೊಂಡಿರುವ ಹಾಗೂ ಬರಗಾಲದ ಆಪತ್ತಿನಲ್ಲಿರುವ ಅಫ್ಘಾನ್‌ಗೆ ಮಾನವೀಯ ನೆರವು ಒದಗಿಸುವ ಬಗ್ಗೆ ತಾಲಿಬಾನ್ ಸರಕಾರದೊಂದಿಗೆ ಚರ್ಚಿಸಲಿದ್ದಾರೆ ಎಂದು ಭಾರತ ಘೋಷಿಸಿದೆ.

 2021ರ ಆಗಸ್ಟ್‌ನಲ್ಲಿ ಅಫ್ಘಾನ್‌ನ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದ ಬಳಿಕ ಆ ದೇಶದಲ್ಲಿನ ರಾಜತಾಂತ್ರಿಕರನ್ನು ಭಾರತ ವಾಪಾಸು ಕರೆಸಿಕೊಂಡಿದೆ. ಆ ಬಳಿಕ ಇತರ ದೇಶಗಳಲ್ಲಿ ಒಂದೆರೆಉ ಬಾರಿ ತಾಲಿಬಾನ್ ಮುಖಂಡರೊಂದಿಗೆ ಭಾರತದ ನಿಯೋಗ ಮಾತುಕತೆ ನಡೆಸಿದ್ದರೂ, ಆ ದೇಶಕ್ಕೆ ತನ್ನ ರಾಜತಾಂತ್ರಿಕರು ಭೇಟಿ ನೀಡುವ ಬಗ್ಗೆ ಇದೇ ಮೊದಲ ಬಾರಿಗೆ ಘೋಷಣೆ ಮಾಡಿದೆ.

ಅಫ್ಘಾನ್ಗೆ ನಾವು ಒದಗಿಸುವ ಮಾನವೀಯ ನೆರವಿನ ವಿತರಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಲು ವಿದೇಶ ವ್ಯವಹಾರ ಇಲಾಖೆಯ ಜಂಟಿ ಕಾರ್ಯದರ್ಶಿ ನೇತೃತ್ವದ ತಂಡವೊಂದು ಕಾಬೂಲ್‌ಗೆ ಭೇಟಿ ನೀಡಿದ್ದು ಅಲ್ಲಿ ತಾಲಿಬಾನ್ನ ಹಿರಿಯ ಸದಸ್ಯರೊಂದಿಗೆ ಭಾರತ ರವಾನಿಸಿರುವ ಮಾನವೀಯ ನೆರವಿನ ಕುರಿತು ಮಾತುಕತೆ ನಡೆಸಲಿದೆ ಎಂದು ಭಾರತದ ವಿದೇಶಾಂಗ ಇಲಾಖೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದೆ. ಅಫ್ಘಾನ್‌ಗೆ ರಾಜತಾಂತ್ರಿಕರ ನಿಯೋಗದ ಭೇಟಿ ತಾಲಿಬಾನ್ನೊಂದಿಗೆ ಸಂಪರ್ಕ ಮುಂದುವರಿಸುವಲ್ಲಿನ ಒಂದು ಉತ್ತಮ ಉಪಕ್ರಮವಾಗಿದೆ ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ, ಅಂತರಾಷ್ಟ್ರೀಯ ಸಂಘಟನೆಗಳ ಸದಸ್ಯರೊಂದಿಗೂ ಭಾರತದ ನಿಯೋಗ ಮಾತುಕತೆ ನಡೆಸಲಿದೆ ಹಾಗೂ ಆ ದೇಶದಲ್ಲಿ ಭಾರತದ ಯೋಜನೆ ಜಾರಿಯಲ್ಲಿರುವ ಪ್ರದೇಶಗಳಿಗೆ ಭೇಟಿ ನೀಡಲಿದೆ ಎಂದು ಹೇಳಿಕೆ ತಿಳಿಸಿದೆ.

ಅಫ್ಘಾನ್ ವಿರುದ್ಧ ಜಾರಿಯಲ್ಲಿರುವ ಆರ್ಥಿಕ ನಿರ್ಬಂಧ ಹಾಗೂ ಬರಗಾಲದ ಪರಿಸ್ಥಿತಿಯ ಕಾರಣ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಆ ದೇಶಕ್ಕೆ 50,000 ಮೆಟ್ರಿಕ್ ಟನ್‌ಗಳಷ್ಟು ಗೋಧಿ ರವಾನಿಸುವುದಾಗಿಯೂ ಭಾರತ ಸರಕಾರ ಘೋಷಿಸಿದೆ. ಇದುವರೆಗೆ ಪಾಕಿಸ್ತಾನದ ಪ್ರದೇಶದ ಮೂಲಕವಾಗಿ ಅಫ್ಘಾನ್‌ಗೆ ಭಾರತ 20,000 ಮೆಟ್ರಿಕ್ ಟನ್‌ಗಳಷ್ಟು ಗೋಧಿ ಒದಗಿಸಿದೆ, ಅಲ್ಲದೆ ಆ ದೇಶಕ್ಕೆ ಕೋವಿಡ್ ಲಸಿಕೆಗಳನ್ನೂ ಒದಗಿಸಿದೆ. ಆದರೆ ಲಸಿಕೆಗಳು ಹಾಗೂ ಇತರ ಔಷಧ ಸಾಮಾಗ್ರಿಗಳನ್ನು ನೇರವಾಗಿ ತಾಲಿಬಾನ್ ಸರಕಾರಕ್ಕೆ ನೀಡುವುದಿಲ್ಲ. ಬದಲಿಗೆ ವಿಶ್ವಸಂಸ್ಥೆಯ ಸಹಸಂಸ್ಥೆಗಳಾದ ವಿಶ್ವ ಆಹಾರ ಸಂಘಟನೆ, ವಿಶ್ವ ಆಹಾರ ಏಜೆನ್ಸಿಯಂತಹ ವಿಶ್ವಸಂಸ್ಥೆಯ ಯೋಜನೆಗಳಿಗೆ ಮತ್ತು ಕಾಬೂಲ್‌ನಲ್ಲಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಗೆ ಹಸ್ತಾಂತರಿಸಲಾಗುವುದು ಎಂದು ಭಾರತ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News