×
Ad

ಜಮ್ಮು: ಸರಣಿ ಹತ್ಯೆಗಳಿಂದ ಭಯಭೀತಗೊಂಡ ಸರಕಾರಿ ಉದ್ಯೋಗಿಗಳ ಜಾಥಾ, ವರ್ಗಾವಣೆಗೆ ಆಗ್ರಹ

Update: 2022-06-02 21:14 IST

ಜಮ್ಮು,ಜೂ.2: ಕಾಶ್ಮೀರದಲ್ಲಿ ನಿರಂತರವಾಗಿ ನಡೆಯುತ್ತಿರುವ ಉದ್ದೇಶಿತ ಹತ್ಯೆಗಳ ನಡುವೆಯೇ ಕಣಿವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ಸರಕಾರಿ ಉದ್ಯೋಗಿಗಳು ಗುರುವಾರ ಇಲ್ಲಿಯ ಪ್ರೆಸ್ ಕ್ಲಬ್‌ನಿಂದ ಅಂಬೇಡ್ಕರ್ ಚೌಕದವರೆಗೆ ಜಾಥಾ ನಡೆಸಿ, ತಮ್ಮನ್ನು ತಕ್ಷಣ ತವರು ಜಿಲ್ಲೆಗಳಿಗೆ ವರ್ಗಾಯಿಸುವಂತೆ ಆಗ್ರಹಿಸಿದರು. 

ತಮ್ಮ ಬೇಡಿಕೆಯನ್ನು ಬೆಂಬಲಿಸಿ ಭಿತ್ತಿಪತ್ರಗಳು ಮತ್ತು ಮಂಗಳವಾರ ಕುಲ್ಗಾಮ್‌ನಲ್ಲಿ  ಉಗ್ರರಿಂದ ಹತ್ಯೆಗೀಡಾಗಿದ್ದ ಶಾಲಾ ಶಿಕ್ಷಕಿ ರಜನಿ ಬಾಲಾ ಅವರ ಚಿತ್ರಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ತಮ್ಮ ಸ್ಥಳಾಂತರಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
 
ಅಖಿಲ ಜಮ್ಮು ಮೂಲದ ಮೀಸಲು ವರ್ಗಗಳ ಉದ್ಯೋಗಿಗಳ ಸಂಘದ ಆಶ್ರಯದಲ್ಲಿ ಸಮಾವೇಶಗೊಂಡಿದ್ದ ಪ್ರತಿಭಟನಾಕಾರರು,ಉದ್ದೇಶಿತ ಹತ್ಯೆಗಳನ್ನು ತಡೆಯುವಲ್ಲಿ ಮತ್ತು ತಮಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸುವಲ್ಲಿ ಸರಕಾರವು ವಿಫಲಗೊಂಡಿರುವುದರಿಂದ ತಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಹೇಳಿದರು.

‘ಜಮ್ಮುವಿನ ವಿವಿಧ ಜಿಲ್ಲೆಗಳ ಸುಮಾರು 8,000 ಉದ್ಯೋಗಿಗಳು ಅಂತರ್ ಜಿಲ್ಲಾ ವರ್ಗಾವಣೆ ನೀತಿಯಡಿ ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸಕ್ತ ವಾತಾವರಣದಲ್ಲಿ ನಾವು ಕೆಲಸಕ್ಕೆ ಮರಳುವುದಿಲ್ಲ. ಅಲ್ಲಿ ನಾವು ಕಳೆದ 15 ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದ್ದೇವೆ,ಆದರೆ ಉದ್ದೇಶಿತ ಹತ್ಯೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾವು ಅಭದ್ರತೆ ಮತ್ತು ಉದ್ವಿಗ್ನತೆಯನ್ನು ಅನುಭವಿಸುತ್ತಿದ್ದೇವೆ ’ ಎಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ಚಂದ್ ತಿಳಿಸಿದರು.

‘ಅಲ್ಲಿ ಮುಸ್ಲಿಮರು,ಹಿಂದುಗಳು ಮತ್ತು ಸಿಕ್ಖರು ಸೇರಿದಂತೆ ಯಾರೂ ಸುರಕ್ಷಿತರಾಗಿಲ್ಲ. ಹದಗೆಡುತ್ತಿರುವ ಭದ್ರತಾ ಸ್ಥಿತಿಯಿಂದ ನಾವು ಹತಾಶರಾಗಿದ್ದೇವೆ. ಯಾವುದೇ ಸಮಯದಲ್ಲಿ ಯಾರು ಬೇಕಾದರೂ ಭಯೋತ್ಪಾದಕರ ದಾಳಿಗೆ ಬಲಿಯಾಗಬಹುದು’ ಎಂದರು.

‘ನಮಗೆ ಸರಕಾರದಿಂದ ವಸತಿ ಸೌಲಭ್ಯ ಅಥವಾ ಭಡ್ತಿ ಬೇಕಾಗಿಲ್ಲ. ಪ್ರತಿಯೊಬ್ಬ ಉದ್ಯೋಗಿಗೂ ಭದ್ರತೆ ಒದಗಿಸುವುದು ಸಾಧ್ಯವಿಲ್ಲದ್ದರಿಂದ ನಮ್ಮನ್ನು ಕಣಿವೆಯಿಂದ ಹೊರಗೆ ವರ್ಗಾಯಿಸಬೇಕು ಎನ್ನುವುದನ್ನಷ್ಟೇ ನಾವು ಬಯಸಿದ್ದೇವೆ’ ಎಂದು ಹೇಳಿದ ಇನ್ನೋರ್ವ ಉದ್ಯೋಗಿ ಅಂಜನಾ ಬಾಲಾ,‘ನಮಗೆ ಸ್ಥಳೀಯರಿಂದ ಎಂದೂ ಸಮಸ್ಯೆಯಾಗಿಲ್ಲ, ಅವರು ನಮ್ಮನ್ನು ಬೆಂಬಲಿಸುತ್ತಲೇ ಬಂದಿದ್ದಾರೆ’ ಎಂದರು.

‘370ನೇ ವಿಧಿಯ ರದ್ದತಿಯನ್ನು ವಿರೋಧಿಸಿದ್ದ ಕಾಶ್ಮೀರಿಗಳನ್ನು ನಾವು ಬೆಂಬಲಿಸಿರಲಿಲ್ಲ. ಅವರ ನಿಲುವು ಸರಿಯಾಗಿತ್ತು ಮತ್ತು ನಾವು ಇಂದು ನಮ್ಮ ನಿರ್ಧಾರಕ್ಕಾಗಿ ವಿಷಾದಿಸುತ್ತಿದ್ದೇವೆ. ನಾವು ವಿಶೇಷ ಸ್ಥಾನಮಾನವನ್ನು ಕಳೆದುಕೊಂಡಿದ್ದೇವೆ ಎನ್ನುವುದನ್ನು ಬಿಟ್ಟರೆ ವಾಸ್ತವದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ ’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News