×
Ad

ಕೇರಳದಲ್ಲಿ ಉಪ ಚುನಾವಣೆ: ಭಾರೀ ಅಂತರದಿಂದ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ಉಮಾ ಥಾಮಸ್

Update: 2022-06-03 13:15 IST
Photo:ANI

ತಿರುವನಂತಪುರ: ಕೇರಳದ ಎರ್ನಾಕುಲಂ ಜಿಲ್ಲೆಯ ತ್ರಿಕ್ಕಕರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ದಾಖಲಿಸಿರುವ  ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಉಮಾ ಥಾಮಸ್ ತನ್ನ ಸಮೀಪದ ಪ್ರತಿಸ್ಪರ್ಧಿ ಎಲ್ ಡಿಎಫ್  ಅಭ್ಯರ್ಥಿ ಡಾ.ಜೋ ಜೋಸೆಫ್ ಅವರನ್ನು 25,000ಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿದರು.

ಕಾಂಗ್ರೆಸ್ ಶಾಸಕ ಪಿ.ಟಿ. ಥಾಮಸ್ ನಿಧನದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿದೆ. ದಿವಂಗತ ಶಾಸಕರ ಪತ್ನಿ ಉಮಾ ಥಾಮಸ್‌ ಅವರನ್ನು  ಕಾಂಗ್ರೆಸ್‌ ಕಣಕ್ಕಿಳಿಸಿತು. ಆಡಳಿತಾರೂಢ ಎಲ್ ಡಿಎಫ್  ಹೃದ್ರೋಗ ತಜ್ಞ ಡಾ.  ಜೋ ಜೋಸೆಫ್ ರನ್ನು ಸ್ಪರ್ಧೆಗಿಳಿಸಿತ್ತು. ಬಿಜೆಪಿ ಕೂಡ ತನ್ನ ಅನುಭವಿ ನಾಯಕ ಎ.ಎನ್. ರಾಧಾಕೃಷ್ಣನ್ ರನ್ನು  ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು.

ಮತ ಎಣಿಕೆಯ ಆರಂಭದಿಂದಲೇ ಉಮಾ ಸ್ಪಷ್ಟ ಮುನ್ನಡೆ ಕಾಯ್ದುಕೊಂಡರು. ಪ್ರತಿ ಸುತ್ತಿನಲ್ಲಿ ತಮ್ಮ ಅಂತರವನ್ನು ಹೆಚ್ಚಿಸಿಕೊಂಡರು. 2016 ರಿಂದ ಕಾಂಗ್ರೆಸ್ ಭದ್ರಕೋಟೆಯನ್ನು ಪ್ರತಿನಿಧಿಸುತ್ತಿದ್ದ ಪಿ.ಟಿ. ಥಾಮಸ್ 2021 ರಲ್ಲಿ 14,300 ಮತಗಳ ಅಂತರದಿಂದ ಜಯ ಸಾಧಿಸಿದ್ದರು.ಆದರೆ ಅವರ ಪತ್ನಿ ಉಮಾ ಅವರು ಪತಿಗಿಂತ ಹೆಚ್ಚಿನ ಅಂತರದಿಂದ ಗೆದ್ದಿದ್ದಾರೆ.

1.96 ಲಕ್ಷ ಮತದಾರರ ಪೈಕಿ 1.35 ಲಕ್ಷ ಮಂದಿ ಮತದಾನ ಮಾಡಿದ್ದು, ಶೇ.68.77ರಷ್ಟು ಮತದಾನವಾಗಿದೆ. ಉಪಚುನಾವಣೆಯ ಮತದಾನದ ಪ್ರಮಾಣವು 2011 ರ ವಿಧಾನಸಭಾ ಚುನಾವಣೆಯ ನಂತರ ತುಲನಾತ್ಮಕವಾಗಿ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News