ಕೇರಳದಲ್ಲಿ ಸಿಎಎ ಜಾರಿಗೊಳಿಸುವುದಿಲ್ಲ: ಪಿಣರಾಯಿ ವಿಜಯನ್‌ ಸ್ಪಷ್ಟ ನುಡಿ

Update: 2022-06-03 15:14 GMT

ತಿರುವನಂತಪುರ,ಜೂ.2: ತನ್ನ ಸರಕಾರವು ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿಗೊಳಿಸುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸ್ಪಷ್ಟಪಡಿಸಿದ್ದಾರೆ.

ಗುರುವಾರ ಇಲ್ಲಿ ಎಲ್ಡಿಎಫ್ ಸರಕಾರದ ಎರಡನೇ ಅಧಿಕಾರಾವಧಿಯ ಮೊದಲ ವರ್ಷಾಚರಣೆ ಪ್ರಯುಕ್ತ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ಸಿಎಎ ಕುರಿತು ತನ್ನ ಸರಕಾರವು ಸ್ಪಷ್ಟವಾದ ನಿಲುವನ್ನು ಹೊಂದಿದೆ ಮತ್ತು ಅದು ಮುಂದುವರಿಯುತ್ತದೆ ಎಂದು ತಿಳಿಸಿದರು.
ರಾಜ್ಯ ಸರಕಾರವು ಧರ್ಮವನ್ನು ಆಧರಿಸಿ ಪೌರತ್ವವನ್ನು ನಿರ್ಧರಿಸುವುದಿಲ್ಲ ಎಂದೂ ಅವರು ಪುನರುಚ್ಚರಿಸಿದರು. ಪಿಣರಾಯಿ ಈ ಹಿಂದೆಯೂ ಹಲವಾರು ಬಾರಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

 ಭಾರತವು ಜಾತ್ಯತೀತತೆಯ ತತ್ತ್ವದ ಮೇಲೆ ಕಾರ್ಯ ನಿರ್ವಹಿಸುತ್ತದೆ ಎಂದು ಒತ್ತಿ ಹೇಳಿದ ಅವರು,ಇಂದು ಜಾತ್ಯತೀತತೆಯನ್ನು ನಾಶಗೊಳಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಜನರ ನಡುವೆ ಕೋಮು ಉದ್ವಿಗ್ನತೆಯನ್ನು ಸೃಷ್ಟಿಸಲು ದೇಶದ ವಿವಿಧ ಭಾಗಗಳಲ್ಲಿ ಹಲವಾರು ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ವಾರಣಾಸಿಯ ಜ್ಞಾನವಾಪಿ ಮಸೀದಿಯ ಸರ್ವೆಯನ್ನು ಉಲ್ಲೇಖಿಸಿ ಹೇಳಿದರು.‘ಆದರೆ ನಮ್ಮ ರಾಜ್ಯದಲ್ಲಿ ಸಮಾಜದಲ್ಲಿಯ ಅತ್ಯಂತ ಬಡಕುಟುಂಬಗಳನ್ನು ಗುರುತಿಸಲು ಸಮೀಕ್ಷೆಯನ್ನು ನಡೆಸಲಾಗಿದೆ ಮತ್ತು ಸಮೀಕ್ಷೆಯ ಭಾಗವಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವದು ಎಂದರು.

ಈ ತಿಂಗಳ ಆರಂಭದಲ್ಲಿ ತಾನು ಸಿಎಎ ಅನ್ನು ಜಾರಿಗೊಳಿಸುವುದಿಲ್ಲ ಎಂದು ಪ.ಬಂಗಾಲದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರಕಾರವು ಹೇಳಿದ್ದಾಗ,ಅದು ಸುಳ್ಳು ನುಡಿಯುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News