ಜುಜುಬಿ ಪಿಐಎಲ್ ಗಳಿಗಾಗಿ ಸುಪ್ರೀಂ ತರಾಟೆ: ಪುರಿ ಉತ್ಖನನದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ

Update: 2022-06-03 18:17 GMT

ಹೊಸದಿಲ್ಲಿ,ಜೂ.3: ಪುರಿಯ ಪ್ರಸಿದ್ಧ ಶ್ರೀಜಗನ್ನಾಥ ದೇವಸ್ಥಾನದಲ್ಲಿ ಒಡಿಶಾ ಸರಕಾರವು ಕಾನೂನುಬಾಹಿರವಾಗಿ ಉತ್ಖನನ ಮತ್ತು ನಿರ್ಮಾಣ ಕಾರ್ಯವನ್ನು ನಡೆಸುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಶುಕ್ರವಾರ ತಿರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ಜುಜುಬಿ ಅರ್ಜಿಯನ್ನು ಸಲ್ಲಿಸಿದ್ದಕ್ಕಾಗಿ ಅರ್ಜಿದಾರರನ್ನು ತೀವ್ರ ತರಾಟೆಗೆತ್ತಿಕೊಂಡಿತು. ಇದು ಪಿಐಎಲ್ ಅಲ್ಲ,ಪ್ರಚಾರದ ಹಿತಾಸಕ್ತಿಯ ಅರ್ಜಿಯಾಗಿದೆ ಎಂದು ಹೇಳಿದ ಅದು,ಸಾರ್ವಜನಿಕ ಹಿತಾಸಕ್ತಿಯಲ್ಲಿ ಒಡಿಶಾ ಸರಕಾರದ ಜಗನ್ನಾಥ ದೇವಸ್ಥಾನದ ಪುನರಾಭಿವೃದ್ಧಿ ಯೋಜನೆಗೆ ಹಸಿರು ನಿಶಾನೆಯನ್ನು ತೋರಿಸಿತು.

ಇಂತಹ ಅರ್ಜಿಗಳು ವೈಯಕ್ತಿಕ ಹಿತಾಸಕ್ತಿ ಮತ್ತು ಪ್ರಚಾರದ ಉದ್ದೇಶವನ್ನು ಹೊಂದಿದ್ದು,ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುತ್ತವೆ. ಇವುಗಳಿಗೆ ಆರಂಭದಲ್ಲಿಯೇ ಅಂಕುಶ ಹಾಕಬೇಕು ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಹಿಮಾ ಕೊಹ್ಲಿ ಅವರ ಪೀಠವು ಹೇಳಿತು. ಇಬ್ಬರು ಅರ್ಜಿದಾರರಿಗೆ ತಲಾ ಒಂದು ಲ.ರೂ.ದಂಡವನ್ನೂ ವಿಧಿಸಿದ ಸರ್ವೋಚ್ಚ ನ್ಯಾಯಾಲಯವು ಅರ್ಜಿಗಳನ್ನು ವಜಾಗೊಳಿಸಿತು. ಮುಂಬರುವ ರಥಯಾತ್ರೆಗಾಗಿ ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ತಾನು ಬಯಸಿದ್ದೇನೆ ಎಂದು ರಾಜ್ಯ ಸರಕಾರವು ನ್ಯಾಯಾಲಯಕ್ಕೆ ತಿಳಿಸಿತ್ತು.

‘ಭಕ್ತರಿಗೆ ಮೂಲ ಸೌಲಭ್ಯಗಳಿಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡುವುದರಿಂದ ಸರಕಾರವನ್ನು ತಡೆಯಬಹುದೇ? ಉತ್ತರ ಸ್ಪಷ್ಟವಾಗಿ ಇಲ್ಲ ಎಂದಾಗಿದೆ ’ ಎಂದು ನ್ಯಾಯಾಧೀಶರು ಹೇಳಿದರು.‘ಇತ್ತೀಚಿನ ದಿನಗಳಲ್ಲಿ ನಾಯಿಕೊಡೆಗಳಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದರೆ ಇಂತಹ ಹೆಚ್ಚಿನ ಅರ್ಜಿಗಳಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇರುವುದಿಲ್ಲ. ಈ ಅರ್ಜಿಗಳನ್ನು ಪ್ರಚಾರಕ್ಕಾಗಿ ಅಥವಾ ವೈಯಕ್ತಿಕ ಹಿತಾಸಕ್ತಿಯಿಂದ ಸಲ್ಲಿಸಲಾಗುತ್ತಿದೆ. ಇಂತಹ ಜುಜುಬಿ ಅರ್ಜಿಗಳನ್ನು ಸಲ್ಲಿಸುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅವು ಕಾನೂನು ಪ್ರಕ್ರಿಯೆಯ ದುರುಪಯೋಗವೇ ಹೊರತು ಬೇರೇನೂ ಅಲ್ಲ ’ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News