×
Ad

ಹೈದರಾಬಾದ್: ಅಪ್ರಾಪ್ತೆಯ ಮೇಲೆ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ

Update: 2022-06-03 14:51 IST
Photo:PTI

ಹೈದರಾಬಾದ್,ಜೂ.3: ನಗರದಲ್ಲಿಯ ಪಬ್ವೊಂದಕ್ಕೆ ಪಾರ್ಟಿಗೆ ತೆರಳಿದ್ದ ಹದಿಹರೆಯದ ಬಾಲಕಿಯನ್ನು ಶಾಲಾ ವಿದ್ಯಾರ್ಥಿಗಳ ಗುಂಪೊಂದು ಮರ್ಸಿಡಿಸ್ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರಗೈದ ಘಟನೆ ಕಳೆದ ಶನಿವಾರ ನಗರದ ಐಷಾರಾಮಿ ಬಡಾವಣೆಗಳಲ್ಲೊಂದಾದ ಜ್ಯುಬಿಲಿ ಹಿಲ್ಸ್ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

 ಆರೋಪಿಗಳು 11 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳಾಗಿದ್ದು, ರಾಜಕೀಯವಾಗಿ ಪ್ರಭಾವಿ ಕುಟುಂಬಗಳಿಗೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಶಾಸಕರೋರ್ವರ ಪುತ್ರ ಕೂಡ ಗುಂಪಿನಲ್ಲಿದ್ದ ಎನ್ನಲಾಗಿದೆ. ಆದರೆ ಆತ ಸಾಮೂಹಿಕ ಅತ್ಯಾಚಾರ ಕೃತ್ಯದಲ್ಲಿ ಭಾಗಿಯಾಗಿರಲಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಶನಿವಾರ ಸಂಜೆ 17ರ ಹರೆಯದ ಬಾಲಕಿ ಸ್ನೇಹಿತನೊಂದಿಗೆ ಪಬ್ಗೆ ತೆರಳಿದ್ದು,ಆತ ಬೇಗನೆ ಅಲ್ಲಿಂದ ನಿರ್ಗಮಿಸಿದ್ದ. ಬಾಲಕಿ ಅಲ್ಲಿದ್ದ ಆರೋಪಿಗಳ ಪೈಕಿ ಓರ್ವನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಳು. ಮನೆಗೆ ಬಿಡುವುದಾಗಿ ಆರೋಪಿಗಳು ಭರವಸೆ ನೀಡಿದ್ದರಿಂದ ಬಾಲಕಿ ಅವರೊಂದಿಗೆ ತೆರಳಿದ್ದಳು.

ಪಬ್ನಿಂದ ಪೇಸ್ಟ್ರಿ ಅಂಗಡಿಯೊಂದಕ್ಕೆ ತೆರಳಿದ್ದ ಆರೋಪಿಗಳು ಬಳಿಕ ಕಾರನ್ನು ಜ್ಯುಬಿಲಿ ಹಿಲ್ಸ್ನಲ್ಲಿ ನಿಲ್ಲಿಸಿ ಒಬ್ಬರಾದ ನಂತರ ಒಬ್ಬರಂತೆ ಬಾಲಕಿಯ ಮೇಲೆ ಅತ್ಯಾಚಾರ ನಡೆಸುತ್ತಿದ್ದರೆ ಉಳಿದವರು ಕಾರಿನ ಹೊರಗೆ ಕಾವಲು ಕಾಯುತ್ತಿದ್ದರು. ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಶಾಸಕರ ಪುತ್ರ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವ ಮೊದಲೇ ಕಾರಿನಿಂದ ಇಳಿದು ಪರಾರಿಯಾಗಿದ್ದ ಎನ್ನಲಾಗಿದೆ.

ಮಗಳ ಕುತ್ತಿಗೆಯಲ್ಲಿ ಗಾಯಗಳನ್ನು ಗಮನಿಸಿದ್ದ ಬಾಲಕಿಯ ತಂದೆ ಆ ಬಗ್ಗೆ ಪ್ರಶ್ನಿಸಿದ್ದರು. ಪಬ್ನಲ್ಲಿ ಪಾರ್ಟಿಯ ಬಳಿಕ ಕೆಲವು ಹುಡುಗರು ತನ್ನ ಮೇಲೆ ಹಲ್ಲೆ ನಡೆಸಿದ್ದರು ಎಂದು ಆಕೆ ತಿಳಿಸಿದ್ದಳು.ಬಾಲಕಿಯ ತಂದೆಯ ದೂರಿನ ಮೇರೆಗೆ ಪೊಲೀಸರು ಆರಂಭದಲ್ಲಿ ‘ಘನತೆಗೆ ಧಕ್ಕೆಯುಂಟು ಮಾಡಿದ’ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಬಳಿಕ ಬಾಲಕಿಯ ವಿವರವಾದ ಹೇಳಿಕೆಯ ಆಧಾರದಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.‘ಬಾಲಕಿಯ ತಂದೆ ನಮ್ಮನ್ನು ಸಂಪರ್ಕಿಸಿದ್ದರು. ಅವರ ಹೇಳಿಕೆಯ ಆಧಾರದಲ್ಲಿ ನಾವು ಘನತೆಗೆ ಧಕ್ಕೆಯುಂಟು ಮಾಡಿದ ಆರೋಪದಲ್ಲಿ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದೆವು. ಏನು ಸಂಭವಿಸಿತ್ತು ಎನ್ನುವುದು ಅವರಿಗೂ ಖಚಿತವಿರಲಿಲ್ಲ ಮತ್ತು ಬಾಲಕಿಯೂ ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆಕೆಯನ್ನು ಮಹಿಳಾ ಅಧಿಕಾರಿಗಳ ಬಳಿಗೆ ಕಳುಹಿಸಿದಾಗ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಳು’ ಎಂದು ಪೊಲೀಸ್ ಅಧಿಕಾರಿ ಜೋಯೆಲ್ ಡೇವಿಸ್ ಸುದ್ದಿಸಂಸ್ಥೆಗೆ ತಿಳಿಸಿದರು.

ಆರೋಪಿಗಳ ಗುರುತು ಬಹಿರಂಗಗೊಳಿಸಲು ಬಾಲಕಿಗೆ ಸಾಧ್ಯವಾಗಿರಲಿಲ್ಲ,ಒಬ್ಬನ ಹೆಸರು ಮಾತ್ರ ಆಕೆಗೆ ತಿಳಿದಿತ್ತು. ಸಿಸಿಟಿವಿ ತುಣುಕು ಮತ್ತು ತಾಂತ್ರಿಕ ಪುರಾವೆಗಳ ಆಧಾರದಲ್ಲಿ ಶಂಕಿತರಿಗಾಗಿ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದರು.
  ಅಪ್ರಾಪ್ತ ವಯಸ್ಕರಿಗೆ ಪಬ್ನಲ್ಲಿ ಪ್ರವೇಶ ನೀಡಿದ್ದು ಹೇಗೆ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News